ಪಾಕಿಸ್ತಾನದಲ್ಲಿ ಅಪರಿಚಿತ ಹಂತಕರ ದಾಳಿ: ಪಠಾಣ್ ಕೋಟ್ ದಾಳಿಯ ಸೂತ್ರಧಾರ ಲತೀಫ್ ಹತ್ಯೆ

ಇಸ್ಲಮಾಬಾದ್: 2016ರಲ್ಲಿ ಪಠಾಣ್ ಕೋಟ್ ನಲ್ಲಿನ ಭಾರತೀಯ ವಾಯುಪಡೆಯ ನೆಲೆಯ ಮೇಲೆ ನಡೆದ ದಾಳಿಯ ಸೂತ್ರಧಾರ , ಜೈಷೆ ಮುಹಮ್ಮದ್(ಜೆಇಎಂ) ಕಮಾಂಡರ್ ಶಾಹಿದ್ ಲತೀಫ್ ನನ್ನು ಮಂಗಳವಾರ ಪಾಕಿಸ್ತಾನದ ಸಿಯಾಲ್ಕೋಟ್ ಜಿಲ್ಲೆಯ ದಾಸ್ಕಾ ನಗರದ ಮಸೀದಿಯಲ್ಲಿ ಗುರುತಿಸಲಾಗದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿವೆ.
ಬಿಲಾಲ್ ಎಂದೂ ಗುರುತಿಸಿಕೊಳ್ಳುತ್ತಿದ್ದ ಲತೀಫ್ ಹಾಗೂ ಆತನ ಇಬ್ಬರು ಸಹಚರರನ್ನು ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಲತೀಫ್ ತನ್ನ ಚಾಲಕನೊಂದಿಗೆ ಮಸೀದಿಯತ್ತ ತೆರಳುತ್ತಿದ್ದಾಗ ನೂರ್ ಮಸೀದಿಯ ಬಳಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂದು ಸಿಯಾಲ್ ಕೋಟ್ ನ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
2016ರ ಜನವರಿ 2ರಂದು ಕಾಶ್ಮೀರ ಪ್ರತ್ಯೇಕತಾವಾದಿಗಳ ಗುಂಪು ಭಾರತೀಯ ವಾಯುಪಡೆಯ ಪಠಾಣ್ ಕೋಟ್ ನೆಲೆಯ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ 7 ಭದ್ರತಾ ಸಿಬಂದಿ ಹಾಗೂ ನಾಲ್ವರು ದಾಳಿಕೋರರು ಸಾವನ್ನಪ್ಪಿದ್ದರು. ಜತೆಗೆ 22 ಭದ್ರತಾ ಸಿಬಂದಿ ಗಾಯಗೊಂಡಿದ್ದರು. ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ)ಯ ವಾಂಟೆಡ್ ಪಟ್ಟಿಯಲ್ಲಿದ್ದ ಲತೀಫ್ ಕಾನೂನುಬಾಹಿರ ಕೃತ್ಯ(ತಡೆ) ಕಾಯ್ದೆಯಡಿ` ಗೊತ್ತುಪಡಿಸಿದ ಭಯೋತ್ಪಾದಕ'ನಾಗಿದ್ದ ಎಂದು ಭಾರತದ ಗೃಹ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2016ರ ಪಠಾಣ್ ಕೋಟ್ ದಾಳಿಯ ಪ್ರಮುಖ ಸೂತ್ರಧಾರನಾಗಿದ್ದ ಲತೀಫ್ ಜೆಇಎಂನ ಸಿಯಾಲ್ಕೋಟ್ ವಿಭಾಗದ ಲಾಂಚಿಂಗ್ ಕಮಾಂಡರ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಮತ್ತು ಭಾರತದ ಮೇಲಿನ ಭಯೋತ್ಪಾದಕ ದಾಳಿಯ ಯೋಜನೆ ರೂಪಿಸಿ ಅವನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಂದು ವರದಿ ಹೇಳಿದೆ.
1994ರಲ್ಲಿ ಭಾರತದಲ್ಲಿ ಭಯೋತ್ಪಾದನೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಲತೀಫ್ ಗೆ 16 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದ್ದು ಜೆಇಎಂ ಸ್ಥಾಪಕ ಮಸೂದ್ ಅಝರ್ ಜತೆ ಜೈಲಿನಲ್ಲಿದ್ದ. 2010ರಲ್ಲಿ ವಾಘಾ ಗಡಿಯ ಮೂಲಕ ಲತೀಫ್ ನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು.







