ಉಕ್ರೇನ್ ಅನುಪಸ್ಥಿತಿಯಲ್ಲಿ ಕೈಗೊಳ್ಳುವ ನಿರ್ಧಾರದಿಂದ ಶಾಂತಿ ಸ್ಥಾಪನೆ ಅಸಾಧ್ಯ : ಝೆಲೆನ್ಸ್ಕಿ ಎಚ್ಚರಿಕೆ

ಝೆಲೆನ್ಸ್ಕಿ | PTI
ಕೀವ್,ಆ.9: ಉಕ್ರೇನ್ ನ ಅನುಪಸ್ಥಿತಿಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರದಿಂದ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ ಹಾಗೂ ತನ್ನ ಯಾವುದೇ ಪ್ರದೇಶವನ್ನು ರಶ್ಯಕ್ಕೆ ಬಿಟ್ಟುಕೊಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಸಾಮಾಜಿಕ ಜಾಲತಾಣವೊಂದರಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘‘ ಉಕ್ರೇನಿಯನ್ನರು ಅವರ ನೆಲವನ್ನು ಆಕ್ರಮಣಕಾರನಿಗೆ ಬಿಟ್ಟುಕೊಡುವುದಿಲ್ಲ’’ ಎಂದು ಹೇಳಿದ್ದಾರೆ. ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಶ್ಯ ಅಧ್ಯಕ್ಷ ಪುಟಿನ್ ಆಅವರು ಲಾಸ್ಕದಲ್ಲಿ ಮುಂದಿನ ವಾರ ಶೃಂಗಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ.
‘‘ ನಮ್ಮ ವಿರುದ್ಧದ ಯಾವುದೇ ನಿರ್ಧಾರಗಳು, ಉಕ್ರೇನ್ ನ ಉಪಸ್ಥಿತಿಯಿಲ್ಲದ ಯಾವುದೇ ಮಾತುಕತೆಗಳು ಶಾಂತಿ ಸ್ಥಾಪನೆಯ ವಿರುದ್ಧ ಕೈಗೊಳ್ಳುವ ನಿರ್ಧಾರವಾಗಿದೆ. ಇಂತಹ ಮಾತುಕತೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಉಕ್ರೇನ್ ಹೊರತುಪಡಿಸಿ ಯುದ್ಧ ಕೊನೆಗೊಳ್ಳದು ಎಂದವರು ಹೇಳಿದರು. ಶಾಂತಿಯನ್ನು ಸ್ಥಾಪಿಸಬಹುದಾದಂತಹ ವಾಸ್ತವಿಕ ನಿರ್ಧಾರಗಳನ್ನು ಕೈಗೊಳ್ಳಲು ಉಕ್ರೇನ್ ಸಿದ್ಧವಿದೆ. ಆದರೆ ಆ ನಿರ್ಧಾರಗಳು ಘನತೆವೆತ್ತ ಶಾಂತಿಯನ್ನು ತಂದುಕೊಡುವಂತಹದ್ದಾಗಿರಬೇಕು ಎಂದು ಝೆಲೆನ್ಸ್ಕಿ ತಿಳಿಸಿದರು.
2022ರ ಫೆಬ್ರವರಿಯಲ್ಲಿ ರಶ್ಯವು ಉಕ್ರೇನ್ ಮೇಲೆ ಆಕ್ರಮಣವನ್ನು ಆರಂಭಿಸಿದ ಆನಂತರ ಕಳೆದ ಮೂರು ವರ್ಷಗಳಲ್ಲಿ ಸಹಸ್ರಾರು ಜನರು ಸಾವನ್ನಪ್ಪಿದ್ದರು ಹಾಗೂ ಲಕ್ಷಾಂತರ ಮಂದಿ ಮನೆಮಾರು ತೊರೆದು ಪರಾರಿಯಾಗಿದ್ದಾರೆ.







