ಅಮೆರಿಕ ವಿರುದ್ಧ ಇಸ್ರೇಲ್ ನ ಗುಪ್ತಚರ ಚಟುವಟಿಕೆಗಳ ಬಗ್ಗೆ ಪೆಂಟಗನ್ ಕಳವಳ: ವರದಿ

Photo: x.com/TimesofIsrael
ವಾಷಿಂಗ್ಟನ್, ಜೂ. 7: ಇರಾನ್ ಮತ್ತು ಲೆಬನಾನ್ ನಲ್ಲಿನ ಯುದ್ಧಗಳ ದಿಕ್ಕು ಹಾಗೂ ಅಮೆರಿಕದ ನೀತಿಗೆ ಸಂಬಂಧಿಸಿದ ಆಂತರಿಕ ಚರ್ಚೆಗಳ ಕುರಿತು ಮಾಹಿತಿ ಸಂಗ್ರಹಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ, ಇಸ್ರೇಲ್ ನಿಂದ ಉಂಟಾಗುವ ಬೇಹುಗಾರಿಕೆ ಅಪಾಯವನ್ನು ಪೆಂಟಗನ್ ‘ಗಂಭೀರ’ ಎಂದು ಪರಿಗಣಿಸಿದೆ ಎಂದು NBC ನ್ಯೂಸ್ ವರದಿ ಮಾಡಿದೆ.
ಪ್ರಸ್ತುತ ಮತ್ತು ಮಾಜಿ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಯ ಪ್ರಕಾರ, ಪೆಂಟಗನ್ ನ ರಕ್ಷಣಾ ಗುಪ್ತಚರ ಸಂಸ್ಥೆ (DIA) ಇತ್ತೀಚಿನ ವಾರಗಳಲ್ಲಿ ತನ್ನ ಆಂತರಿಕ ಮೌಲ್ಯಮಾಪನದಲ್ಲಿ ಈ ಬದಲಾವಣೆ ಮಾಡಿದೆ. ಅಮೆರಿಕದ ಮಧ್ಯಪ್ರಾಚ್ಯ ನೀತಿ ಹಾಗೂ ಪ್ರಾದೇಶಿಕ ಸಂಘರ್ಷಗಳಿಗೆ ಸಂಬಂಧಿಸಿದ ಆಂತರಿಕ ಚರ್ಚೆಗಳ ಕುರಿತು ಮಾಹಿತಿ ಸಂಗ್ರಹಿಸಲು ಇಸ್ರೇಲ್ ಯತ್ನಿಸುತ್ತಿದೆ ಎಂಬ ಕಳವಳ ಅಧಿಕಾರಿಗಳಲ್ಲಿದೆ ಎಂದು ವರದಿ ತಿಳಿಸಿದೆ.
ಪೆಂಟಗನ್ ನ ಮೌಲ್ಯಮಾಪನದಲ್ಲಿ ಅಮೆರಿಕದ ಆತಂಕಕ್ಕೆ ಕಾರಣವಾದ ಹಲವು ನಿರ್ದಿಷ್ಟ ಘಟನೆಗಳನ್ನು ವಿವರಿಸುವ ಏಳು ಪುಟಗಳ ದಾಖಲೆ ಸೇರಿದೆ ಎನ್ನಲಾಗಿದೆ. ಇಸ್ರೇಲ್ನ ಗುಪ್ತಚರ ಸಂಗ್ರಹಣೆಯ ಪ್ರಯತ್ನಗಳು ಮಿತ್ರ ರಾಷ್ಟ್ರಗಳ ನಡುವೆ ಸಾಮಾನ್ಯವಾಗಿ ನಿರೀಕ್ಷಿಸುವ ಮಟ್ಟವನ್ನು ಮೀರಿವೆ ಎಂಬ ಅಭಿಪ್ರಾಯವನ್ನು ಕೆಲ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ, ಯಾವ ನಿರ್ದಿಷ್ಟ ಘಟನೆಯು ಈ ಮೌಲ್ಯಮಾಪನಕ್ಕೆ ಕಾರಣವಾಯಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರ ಮೇಲೂ ಇಸ್ರೇಲ್ ತನ್ನ ಗುಪ್ತಚರ ಚಟುವಟಿಕೆಗಳನ್ನು ಹೆಚ್ಚಿಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ವಿಟ್ಕಾಫ್ ಅವರು ಇರಾನ್ನೊಂದಿಗಿನ ಮಾತುಕತೆಗಳು, ಇಸ್ರೇಲ್–ಹಮಾಸ್ ಸಂಧಾನ ಪ್ರಯತ್ನಗಳು ಹಾಗೂ ರಷ್ಯಾ–ಉಕ್ರೇನ್ ಮಾತುಕತೆಗಳಲ್ಲಿ ಅಮೆರಿಕದ ಪರವಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಅಮೆರಿಕದ ರಕ್ಷಣಾ ನೀತಿ ವಿಭಾಗದ ಅಧೀನ ಕಾರ್ಯದರ್ಶಿ ಎಲ್ಬ್ರಿಡ್ಜ್ ಕೋಲ್ಬಿ ಹಾಗೂ ಅವರ ಸಹೋದ್ಯೋಗಿ ಮೈಕೆಲ್ ಪಿ. ಡಿಮಿನೊ–IV ಅವರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂಬ ಆತಂಕವೂ ವಾಷಿಂಗ್ಟನ್ ನಲ್ಲಿ ವ್ಯಕ್ತವಾಗಿದೆ ಎಂದು ವರದಿಗಳು ತಿಳಿಸಿವೆ.
ಟ್ರಂಪ್ ಆಡಳಿತ ಅಧಿಕಾರಕ್ಕೆ ಬಂದ ನಂತರ ಅಮೆರಿಕದ ಅಧಿಕಾರಿಗಳ ವಿರುದ್ಧ ಇಸ್ರೇಲ್ ನ ಗುಪ್ತಚರ ಚಟುವಟಿಕೆಗಳು ಹೆಚ್ಚು ಆಕ್ರಮಣಕಾರಿಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪ ತಳ್ಳಿಹಾಕಿದ ಇಸ್ರೇಲ್
NBC ವರದಿಯನ್ನು ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಹಾಗೂ ಶ್ವೇತಭವನ ತೀವ್ರವಾಗಿ ತಳ್ಳಿಹಾಕಿವೆ. ಪೆಂಟಗನ್ ಮಾತ್ರ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.
‘ಇಸ್ರೇಲ್ ಅಮೆರಿಕದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪ ಸಂಪೂರ್ಣ ಸುಳ್ಳು’ ಎಂದು ವಾಷಿಂಗ್ಟನ್ ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.
‘ಅಮೆರಿಕದ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅಮೆರಿಕದ ಯಾವುದೇ ಸಂಸ್ಥೆಗಳ ಕುರಿತು ಇಸ್ರೇಲ್ ಗುಪ್ತಚರ ಮಾಹಿತಿ ಸಂಗ್ರಹಿಸುವುದಿಲ್ಲ. ಇಸ್ರೇಲ್ ನ ಗುಪ್ತಚರ ಚಟುವಟಿಕೆಗಳು ಅದರ ಶತ್ರುಗಳನ್ನು ಗುರಿಯಾಗಿರಿಸಿಕೊಂಡಿವೆ. ಇದಕ್ಕೆ ವಿರುದ್ಧವಾದ ಆರೋಪಗಳು ತಪ್ಪು ಮಾಹಿತಿ ಅಥವಾ ರಾಜಕೀಯ ಪ್ರೇರಿತವಾಗಿವೆ’ ಎಂದು ಅವರು ತಿಳಿಸಿದ್ದಾರೆ.
‘ಈ ಸಂಪೂರ್ಣ ವರದಿ ಸುಳ್ಳು. ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾವುದೇ ಅರಿವಿಲ್ಲದ ಮೂಲಗಳಿಂದ ಈ ಮಾಹಿತಿ ಬಂದಿದೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೆಚ್ಚುವರಿ ಮುನ್ನೆಚ್ಚರಿಕೆ
ಹೊಸ ಮೌಲ್ಯಮಾಪನದ ಹಿನ್ನೆಲೆಯಲ್ಲಿ, ಅಮೆರಿಕದ ಅಧಿಕಾರಿಗಳು ಇಸ್ರೇಲ್ ಗೆ ಪ್ರಯಾಣಿಸುವಾಗ ಅಥವಾ ಇಸ್ರೇಲಿ ಅಧಿಕಾರಿಗಳನ್ನು ಭೇಟಿಯಾಗುವಾಗ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸಲಿದ್ದಾರೆ ಎಂದು ವರದಿ ತಿಳಿಸಿದೆ.
‘ಇಸ್ರೇಲ್ಗೆ ಭೇಟಿ ನೀಡುವಾಗ ಅಮೆರಿಕ ಈಗಾಗಲೇ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಮಾಹಿತಿ ಸಂಗ್ರಹಣೆಯಲ್ಲಿ ಅವರು ಆಕ್ರಮಣಕಾರಿ ವಿಧಾನಗಳಿಗೆ ಹೆಸರುವಾಸಿಯಾಗಿದ್ದಾರೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಇರಾನ್ ಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಉನ್ನತ ಮಟ್ಟದ ಗುಪ್ತಚರ ಮಾಹಿತಿ ವಿನಿಮಯದ ಮೇಲೆ ಯಾವುದೇ ಪರಿಣಾಮ ಬೀರಿರುವ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲಾರ್ಡ್ ಪ್ರಕರಣದ ಹಿನ್ನೆಲೆ
1985ರಲ್ಲಿ ಅಮೆರಿಕದ ನೌಕಾಪಡೆಯ ಗುಪ್ತಚರ ವಿಶ್ಲೇಷಕರಾಗಿದ್ದ ಜೋನಾಥನ್ ಪೊಲಾರ್ಡ್ ಅವರನ್ನು ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಳಿಕ ಅವರು ತಪ್ಪೊಪ್ಪಿಕೊಂಡು 30 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು. ಈ ಪ್ರಕರಣವು ಅಮೆರಿಕ–ಇಸ್ರೇಲ್ ಗುಪ್ತಚರ ಸಂಬಂಧಗಳಲ್ಲಿ ದೀರ್ಘಕಾಲದ ವಿವಾದಕ್ಕೆ ಕಾರಣವಾಗಿತ್ತು.
ಟ್ರಂಪ್–ನೆತನ್ಯಾಹು ಭಿನ್ನಾಭಿಪ್ರಾಯ
ಇರಾನ್ ಹಾಗೂ ಲೆಬನಾನ್ಗೆ ಸಂಬಂಧಿಸಿದ ವಿಷಯಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವರದಿ ಹೊರಬಿದ್ದಿದೆ.
ಇರಾನ್ ವಿರುದ್ಧ ಹೊಸ ದಾಳಿಗಳಿಗೆ ನೆತನ್ಯಾಹು ಒತ್ತಾಯಿಸುತ್ತಿದ್ದರೆ, ಟೆಹ್ರಾನ್ ನೊಂದಿಗೆ ರಾಜತಾಂತ್ರಿಕ ಒಪ್ಪಂದ ಸಾಧಿಸಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಲೆಬನಾನ್ನಲ್ಲಿ ಹಿಜ್ಬುಲ್ಲಾ ವಿರುದ್ಧದ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವಂತೆ ಅಮೆರಿಕ ನೀಡಿದ ಸಲಹೆಯನ್ನು ಕೂಡ ಇಸ್ರೇಲ್ ವಿರೋಧಿಸಿದೆ ಎಂದು ವರದಿಗಳು ತಿಳಿಸಿವೆ.
ಈ ವಾರ ಹಿಜ್ಬುಲ್ಲಾ ಸಂಘರ್ಷದ ಕುರಿತು ನಡೆದ ದೂರವಾಣಿ ಸಂಭಾಷಣೆಯಲ್ಲಿ ನೆತನ್ಯಾಹು ಅವರನ್ನು ತಾವು ‘ಹುಚ್ಚ’ ಎಂದು ಕರೆದಿದ್ದಾಗಿ ಟ್ರಂಪ್ ದೃಢಪಡಿಸಿದ್ದರು. ಆದರೆ, ನೆತನ್ಯಾಹು ಅವರನ್ನು ಗೌರವಿಸುತ್ತೇನೆ ಹಾಗೂ ಅವರೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ ಎಂದೂ ಅವರು ಹೇಳಿದ್ದರು.
ಆಕ್ಸಿಯೋಸ್ ವರದಿಯ ಪ್ರಕಾರ, ದೂರವಾಣಿ ಸಂಭಾಷಣೆ ವೇಳೆ ಟ್ರಂಪ್, ‘ನೀವು ಹುಚ್ಚರಾಗಿದ್ದೀರಿ. ನಾನು ಇಲ್ಲದಿದ್ದರೆ ನೀವು ಜೈಲಿನಲ್ಲಿರುತ್ತಿದ್ದರು. ನಾನು ನಿಮ್ಮನ್ನು ರಕ್ಷಿಸುತ್ತಿದ್ದೇನೆ. ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ. ಇದರಿಂದ ಇಸ್ರೇಲ್ ಮೇಲಿನ ಅಸಮಾಧಾನವೂ ಹೆಚ್ಚುತ್ತಿದೆ’ ಎಂದು ನೆತನ್ಯಾಹು ಅವರಿಗೆ ಹೇಳಿದ್ದರು ಎಂದು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ತಿಳಿಸಲಾಗಿದೆ.






