ಗಾಝಾದಲ್ಲಿ ಜನರು ಹಸಿವಿನಿಂದ ನರಳುತ್ತಿದ್ದಾರೆ: ಟ್ರಂಪ್
ಇಸ್ರೇಲ್ ದಾಳಿಗಳಲ್ಲಿ 250ಕ್ಕೂ ಅಧಿಕ ಜನರು ಬಲಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ಅಬುಧಾಬಿ: ಗಾಝಾದ ಸ್ಥಳೀಯ ಆರೋಗ್ಯ ಅಧಿಕಾರಿಗಳ ಪ್ರಕಾರ ಗುರುವಾರ ಬೆಳಿಗ್ಗೆಯಿಂದ ಇಸ್ರೇಲ್ ನಡೆಸಿದ ದಾಳಿಗಳಲ್ಲಿ 250ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇದೇ ವೇಳೆ ಫೆಲೆಸ್ತೀನಿಗಳಿಗೆ ನೆರವು ಒದಗಿಸುವುದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಗಾಝಾದಲ್ಲಿ ಜನರು ಹಸಿವೆಯಿಂದ ನರಳುತ್ತಿದ್ದಾರೆ ಎಂದು ಹೇಳಿದ್ದಾರೆ.
ತನ್ನ ನಾಲ್ಕು ದಿನಗಳ ಕೊಲ್ಲಿ ಪ್ರವಾಸದ ಕೊನೆಯ ದಿನವಾಗಿದ್ದ ಶುಕ್ರವಾರ ಅಬುಧಾಬಿಯಲ್ಲಿ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ವಿಸ್ತರಿಸುವ ಇಸ್ರೇಲ್ ಯೋಜನೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘ಮುಂದಿನ ಒಂದು ತಿಂಗಳಲ್ಲಿ ಬಹಳಷ್ಟು ಒಳ್ಳೆಯ ವಿಷಯಗಳನ್ನು ನಾವು ನೋಡಲಿದ್ದೇವೆ ಎಂದು ನಾನು ಭಾವಿಸಿದ್ದೇನೆ. ನಾವು ಫೆಲೆಸ್ತೀನಿಗಳಿಗೂ ನೆರವಾಗಬೇಕು. ಗಾಝಾದಲ್ಲಿ ಬಹಳಷ್ಟು ಜನರು ಹಸಿವೆಯಿಂದ ನರಳುತ್ತಿರುವುದು ನಿಮಗೂ ಗೊತ್ತು, ಹೀಗಾಗಿ ನಾವು ಎರಡೂ ಕಡೆಗಳನ್ನು ನೋಡಿಕೊಳ್ಳಬೇಕು’ ಎಂದು ಹೇಳಿದರು.
ಮಾರ್ಚ್ನಲ್ಲಿ ಕದನ ವಿರಾಮ ಒಪ್ಪಂದ ಮುರಿದು ಬಿದ್ದ ಬಳಿಕ ಕಳೆದ 24 ಗಂಟೆಗಳು ಅತ್ಯಂತ ಭೀಕರ ಬಾಂಬ್ದಾಳಿಗಳಲ್ಲೊಂದಕ್ಕೆ ಸಾಕ್ಷಿಯಾಗಿವೆ. ಗಾಝಾದಲ್ಲಿ ಹೊಸ ದಾಳಿಯ ಭಾಗವಾಗಿ ಶನಿವಾರ ತಾನು ವ್ಯಾಪಕ ವಾಯುದಾಳಿಗಳನ್ನು ನಡೆಸಿದ್ದಾಗಿ ಇಸ್ರೇಲ್ ಹೇಳಿದೆ. ಹೊಸದಾಗಿ ಭೂದಾಳಿಗಳೂ ಆರಂಭಗೊಳ್ಳುವ ನಿರೀಕ್ಷೆಯಿದೆ.
ಶುಕ್ರವಾರ ದಾಳಿಗಳು ಮುಖ್ಯವಾಗಿ ಗಾಝಾದ ಉತ್ತರ ಭಾಗವನ್ನು ಕೇಂದ್ರೀಕರಿಸಿದ್ದು,ರಾತ್ರಿ ಬೆಳಗಾಗುವುದರಲ್ಲಿ ಡಝನ್ಗಟ್ಟಲೆ ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಝಾ ಆರೋಗ್ಯಸಚಿವಾಲಯದ ವಕ್ತಾರ ಖಲೀಲ್ ಅಲ್-ದೆಕ್ರನ್ ತಿಳಿಸಿದರು.
ಕದನ ವಿರಾಮ ಜಾರಿಗೊಳಿಸುವಂತೆ ಮತ್ತು ದಿಗ್ಭಂಧನವನ್ನು ಕೊನೆಗೊಳಿಸುವಂತೆ ಅಂತರರಾಷ್ಟ್ರೀಯ ಮನವಿಗಳ ಹೊರತಾಗಿಯೂ ಗಾಝಾ ಗಡಿಯುದ್ದಕ್ಕೂ ತನ್ನ ಸೇನಾ ಜಮಾವಣೆ ಮುಂದುವರಿಸಿರುವ ಇಸ್ರೇಲ್ ಬಾಂಬ್ ದಾಳಿಗಳನ್ನು ತೀವ್ರಗೊಳಿಸಿದೆ.
ಗಾಝಾದಲ್ಲಿ ಮಾನವೀಯ ಪರಿಸ್ಥಿತಿಯು ತೀರ ಹದಗೆಟ್ಟಿದೆ. ಎರಡು ತಿಂಗಳುಗಳಿಗೂ ಹೆಚ್ಚಿನ ಸಮಯದಿಂದ ಇಸ್ರೇಲ್ ಈ ಪ್ರದೇಶಕ್ಕೆ ಆಹಾರ,ಇಂಧನ ಮತ್ತು ವೈದ್ಯಕೀಯ ಪೂರೈಕೆಗಳ ಪ್ರವೇಶವನ್ನು ನಿರ್ಬಂಧಿಸಿದೆ. ಇದು ಗಾಝಾ ಎದುರಿಸಿರುವ ಅತ್ಯಂತ ದೀರ್ಘಾವಧಿಯ ದಿಗ್ಬಂಧನವಾಗಿದೆ. ಗಾಝಾದಲ್ಲಿ ಮಾನವೀಯ ವ್ಯವಸ್ಥೆಯು ಕುಸಿದು ಬೀಳುವ ಹಂತದಲ್ಲಿದೆ ಎಂದು ರೆಡ್ ಕ್ರಾಸ್ ಸೇರಿದಂತೆ ನೆರವು ಗುಂಪುಗಳು ಎಚ್ಚರಿಕೆ ನೀಡಿವೆ.
ಗಾಝಾದ ಆರೋಗ್ಯ ಸಚಿವಾಲಯವು ಸುಮಾರು 60,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದೆ. ವಿಶ್ವಸಂಸ್ಥೆಯ ಮಾನವೀಯ ವ್ಯಹಾರಗಳ ಸಮನ್ವಯ ಕಚೇರಿಯು ಈ ಪ್ರದೇಶದಲ್ಲಿಯ ಮಕ್ಕಳಲ್ಲಿ ಅಪೌಷ್ಟಿಕತೆ ಹದಗೆಡುತ್ತಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಮೂಲಭೂತ ಔಷಧಿಗಳೂ ಖಾಲಿಯಾಗಿವೆ ಎಂದು ಗಾಝಾದಲ್ಲಿಯ ವೈದ್ಯರು ಹೇಳಿದ್ದರೆ,ಮಾನವೀಯ ಅಧಿಕಾರಿಗಳು ಇಸ್ರೇಲ್ನ ಮುತ್ತಿಗೆಯಲ್ಲಿರುವ ಗಾಝಾದಲ್ಲಿ ಕ್ಷಾಮವು ಹೆಚ್ಚುತ್ತಿರುವ ಬೆದರಿಕೆಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.







