ದೀರ್ಘ ಮತ ಎಣಿಕೆ ವಿವಾದ: ಪೆರುವಿನ ಚುನಾವಣಾ ಮುಖ್ಯಸ್ಥ ರಾಜೀನಾಮೆ

ಪಿಯೆರೊ ಕಾರ್ವೆಟ್ಟೊ (Photo credit: andina.pe)
ಪೆರು: ಈ ತಿಂಗಳ ಆರಂಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ಉಂಟಾದ ಗೊಂದಲ ಮತ್ತು ಸಾರ್ವಜನಿಕ ಆಕ್ರೋಶದ ನಡುವೆ, ಪೆರುವಿನ ರಾಷ್ಟ್ರೀಯ ಚುನಾವಣಾ ಪ್ರಕ್ರಿಯೆಗಳ ಕಚೇರಿ (ONPE) ಮುಖ್ಯಸ್ಥ ಪಿಯೆರೊ ಕಾರ್ವೆಟ್ಟೊ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.
ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಕಾರ್ವೆಟ್ಟೊ ಈ ವಿಷಯವನ್ನು ತಿಳಿಸಿದ್ದಾರೆ. ರಾಷ್ಟ್ರೀಯ ನ್ಯಾಯ ಮಂಡಳಿ (JNJ)ಗೆ ಬರೆದ ಪತ್ರದಲ್ಲಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಜೂನ್ 7ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನ ಮತದಾನದ ಮುನ್ನ ಜನರ ವಿಶ್ವಾಸವನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಎಪ್ರಿಲ್ 12ರಂದು ನಡೆದ ಮೊದಲ ಸುತ್ತಿನ ಮತದಾನ ಆಯೋಜನಾ ಸಮಸ್ಯೆಗಳ ಕಾರಣದಿಂದ ಅಸ್ತವ್ಯಸ್ತಗೊಂಡಿತ್ತು. ಇದರಿಂದ ರಾಜಧಾನಿ ಲಿಮಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮತದಾನದ ಅವಧಿಯನ್ನು ವಿಸ್ತರಿಸಲಾಗಿತ್ತು. ಚುನಾವಣಾ ವೀಕ್ಷಕರು ಪ್ರಕ್ರಿಯೆಯಲ್ಲಿ ಕೆಲವು ತಪ್ಪುಗಳು ನಡೆದಿರುವುದನ್ನು ಒಪ್ಪಿಕೊಂಡಿದ್ದರೂ, ವಂಚನೆ ನಡೆದಿದೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳು ಇಲ್ಲವೆಂದು ತಿಳಿಸಿದ್ದಾರೆ.
ಪೆರುವಿನ ರಾಷ್ಟ್ರೀಯ ಚುನಾವಣಾ ನ್ಯಾಯಮಂಡಳಿ (JNE) ಮೇ 15ರೊಳಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದೆ. ಅಗ್ರ ಇಬ್ಬರು ಅಭ್ಯರ್ಥಿಗಳು ಎರಡನೇ ಸುತ್ತಿಗೆ ಪ್ರವೇಶಿಸಲಿದ್ದಾರೆ.
ಬಲಪಂಥೀಯ ಅಭ್ಯರ್ಥಿ ಕೀಕೊ ಫ್ಯೂಜಿಮೊರಿ ಶೇಕಡಾ 17 ಮತಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ಎರಡನೇ ಸ್ಥಾನಕ್ಕಾಗಿ ಎಡಪಂಥೀಯ ಕಾಂಗ್ರೆಸ್ಸಿಗ ರಾಬರ್ಟೊ ಸ್ಯಾಂಚೆಜ್ ಮತ್ತು ಲಿಮಾದ ಮಾಜಿ ಮೇಯರ್ ರಾಫೆಲ್ ಲೋಪೆಜ್ ಅಲಿಯಾಗಾ ನಡುವೆ ಕಠಿಣ ಪೈಪೋಟಿ ಇದೆ. ಇವರಿಬ್ಬರೂ ಕ್ರಮವಾಗಿ ಶೇಕಡಾ 12 ಮತ್ತು 11.9 ಮತಗಳನ್ನು ಪಡೆದಿದ್ದಾರೆ.
ದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ಈಗಾಗಲೇ ನಂಬಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಜನರಲ್ಲಿ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಎಪ್ರಿಲ್ ಚುನಾವಣೆಗೆ ಮುನ್ನ Instituto de Estudios Peruanos (IEP) ಮತ್ತು Instituto Bartolomé de las Casas (IBC) ನಡೆಸಿದ ಸಮೀಕ್ಷೆಯ ಪ್ರಕಾರ, ಪೆರುವಿನ ಶೇಕಡಾ 68 ಜನರು ಚುನಾವಣಾ ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲವೆಂದು ತಿಳಿಸಿದ್ದಾರೆ.
ರಾಫೆಲ್ ಲೋಪೆಜ್ ಅಲಿಯಾಗಾ ಸೇರಿದಂತೆ ಕೆಲ ಅಭ್ಯರ್ಥಿಗಳು ಅಕ್ರಮ ಆರೋಪಗಳನ್ನು ಮಾಡುತ್ತಿದ್ದು, ಮೊದಲ ಸುತ್ತಿನ ಮತದಾನವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.
ಕೆಲವು ಮತಪತ್ರಗಳಲ್ಲಿ ಲೆಕ್ಕದ ತಪ್ಪುಗಳು ಕಂಡುಬಂದ ಕಾರಣ ಸಾವಿರಾರು ಮತಪತ್ರಗಳನ್ನು ಅಧಿಕಾರಿಗಳು ಮತ್ತೆ ಪರಿಶೀಲಿಸುತ್ತಿದ್ದಾರೆ.






