ಕೆನಡಾ: ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹದ 2ನೇ ಹಂತ ವಿಫಲ

Photo Source - PTI
ಒಟ್ಟಾವ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಬಹುನಿರೀಕ್ಷಿತ ಭಾರತ ವಿರೋಧಿ ಜನಾಭಿಪ್ರಾಯ ಸಂಗ್ರಹವನ್ನು ಅಧಿಕೃತವಾಗಿ ವಿಫಲವೆಂದು ಘೋಷಿಸಲಾಗಿದೆ.
ರವಿವಾರ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹದ ಮತದಾನದಲ್ಲಿ ಕಡಿಮೆ ಜನರು ಪಾಲ್ಗೊಂಡಿದ್ದರು. ಈ ಹಿಂದೆ ನಡೆದಿದ್ದ ಜನಾಭಿಪ್ರಾಯ ಸಂಗ್ರಹದಲ್ಲಿ ಪಾಲ್ಗೊಂಡವರಲ್ಲಿ ಕೆಲವರು ಈ ಬಾರಿಯ ಮತದಾನದಲ್ಲಿ ಪಾಲ್ಗೊಂಡಿಲ್ಲ. ಮತದಾನ ಮಾಡಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಆದರೆ ಯಾವುದೇ ಹೊಸ ತಂಡ ಭಾಗವಹಿಸುವ ಆಸಕ್ತಿ ತೋರಿಲ್ಲ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ನ್ಯೂಸ್18 ವರದಿ ಮಾಡಿದೆ. ಸೆ.10ರಂದು ನಡೆದಿದ್ದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 1.35 ಲಕ್ಷ ಜನತೆ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಪ್ರತಿಪಾದಿಸಿತ್ತು, ಆದರೆ ಕೇವಲ 2398 ಮತ ಚಲಾವಣೆಗೊಂಡಿತ್ತು ಎಂದು ವರದಿಯಾಗಿದೆ.
ಇದೀಗ ರವಿವಾರ ಸರ್ರೆಯಲ್ಲಿ ನಡೆದ 2ನೇ ಹಂತದ ಜನಾಭಿಪ್ರಾಯ ಸಂಗ್ರಹಣೆಗೂ ಜನತೆ ನಿರಾಸಕ್ತಿ ತೋರಿರುವುದರಿಂದ ಮುಂದಿನ ವರ್ಷ ಅಬೋಟ್ಸ್ಫೋರ್ಡ್, ಎಡ್ಮಂಟನ್, ಕ್ಯಾಲ್ಗರಿ ಮತ್ತು ಮಾಂಟ್ರಿಯಲ್ನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಸುವ ಯೋಜನೆಯ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.
ಕೆನಡಾದಲ್ಲಿ ನಡೆಸುವ ಅನಧಿಕೃತ ‘ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ಉಗ್ರಗಾಮಿಗಳ ರಾಜಕೀಯ ಪ್ರೇರಿತ ಪ್ರಕ್ರಿಯೆ’ ಎಂದು ಭಾರತ ಖಂಡಿಸಿದೆ.





