ಫಿಲಿಪ್ಪೀನ್ಸ್ ಮಾಜಿ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಬಂಧನ

ಮನಿಲಾ: ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಬಂಧನ ವಾರಂಟ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ನ ಮಾಜಿ ಅಧ್ಯಕ್ಷ ರೋಡ್ರಿಗೊ ಡುಟರ್ಟೆಯನ್ನು ಮಾನವೀಯತೆಯ ವಿರುದ್ಧದ ಅಪರಾಧಕ್ಕಾಗಿ ಮನಿಲಾ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮಾಜಿ ಅಧ್ಯಕ್ಷರಿಗೆ ಐಸಿಸಿ ಬಂಧನ ವಾರಂಟ್ ಅನ್ನು ಪ್ರಾಸಿಕ್ಯೂಟರ್ ಜನರಲ್ ಹಸ್ತಾಂತರಿಸಿದರು. ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಹಾಲಿ ಅಧ್ಯಕ್ಷ ಫೆರ್ಡಿನಾಂಡ್ ಮಾರ್ಕೋಸ್(ಜ್ಯೂ) ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಬಂಧನ ಕಾನೂನುಬಾಹಿರ ಕ್ರಮ ಎಂದು ಡುಟರ್ಟೆ ಅವರ ವಕೀಲರು ಖಂಡಿಸಿದ್ದಾರೆ.
2016ರಿಂದ 2022ರವರೆಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಫಿಲಿಪ್ಪೀನ್ಸ್ನಲ್ಲಿ ನಡೆದಿದ್ದ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು ಕಾರ್ಯಾಚರಣೆ ಸಂದರ್ಭ 6000ಕ್ಕೂ ಅಧಿಕ ಮಂದಿಯನ್ನು ಸಾಯಿಸಲಾಗಿತ್ತು. ಈ ಸಂದರ್ಭ ಸರಕಾರದ ಕಾರ್ಯನೀತಿಯು ಕಾನೂನುಬಾಹಿರ ಹತ್ಯೆಗೆ ಅನುವು ಮಾಡಿಕೊಟ್ಟಿತ್ತು ಎಂದು ಐಸಿಸಿ ಆರೋಪಿಸಿದೆ. ಆದರೆ ದೇಶದ ಜನರ ಒಳಿತಿಗಾಗಿ ತನ್ನ ಸರಕಾರ ಕಾರ್ಯಾಚರಣೆ ನಡೆಸಿದೆ ಎಂದು ಡುಟರ್ಟೆ ಸಮರ್ಥಿಸಿಕೊಂಡಿದ್ದಾರೆ.





