ಫೋನ್ ಕರೆ ಸೋರಿಕೆ ವಿವಾದ: ಥಾಯ್ಲೆಂಡ್ ಪ್ರಧಾನಿ ಅಮಾನತು

ಪೇಟಾಂಗ್ಟಾರ್ನ್ ಶಿನವತ್ರ | PC : aljazeera.com
ಬ್ಯಾಂಕಾಕ್: ಥಾಯ್ಲೆಂಡ್ ಪ್ರಧಾನಿ ಪೇಟಾಂಗ್ಟಾರ್ನ್ ಶಿನವತ್ರ ಕಾಂಬೋಡಿಯಾದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ವೇಳೆ ತೋರಿರುವ ವರ್ತನೆ ಕುರಿತು ತನಿಖೆಗೆ ಆದೇಶಿಸಿರುವ ಥಾಯ್ಲೆಂಡ್ ಸಾಂವಿಧಾನಿಕ ನ್ಯಾಯಾಲಯ, ಅವರನ್ನು ಪ್ರಧಾನಿ ಹುದ್ದೆಯಿಂದ ಅಮಾನತುಗೊಳಿಸಿದೆ.
“ಕಾಂಬೋಡಿಯಾದೊಂದಿಗಿನ ಗಡಿ ಬಿಕ್ಕಟ್ಟಿನ ವೇಳೆ ಪೇಂಟಾಗ್ಟಾರ್ನ್ ಶಿನವತ್ರ ಸಚಿವ ಸ್ಥಾನದ ನೈತಿಕತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕನ್ಸರ್ವೇಟಿವ್ ಸೆನೆಟರ್ ಗಳ ಗುಂಪೊಂದು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಸಾಂವಿಧಾನಿಕ ನ್ಯಾಯಾಲಯ, ಸಾಂವಿಧಾನಿಕ ನ್ಯಾಯಾಲಯ ಈ ಪ್ರಕರಣದ ಕುರಿತು ಅಂತಿಮ ತೀರ್ಪು ನೀಡುವವರೆಗೂ, ಜುಲೈ 1ರಿಂದ ಪ್ರತಿವಾದಿಯಾದ ಪೇಟಾಂಗ್ಟಾರ್ನ್ ಶಿನವತ್ರರನ್ನು ಪ್ರಧಾನಿ ಹುದ್ದೆಯ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ನಡುವಿನ ದೀರ್ಘಕಾಲದ ಗಡಿ ವಿವಾದವು ಕಳೆದ ಮೇ ತಿಂಗಳಲ್ಲಿ ಅಂತರ್ ಗಡಿ ಸಂಘರ್ಷಕ್ಕೆ ತಿರುಗಿತ್ತು. ಈ ವೇಳೆ ಕಾಂಬೋಡಿಯಾದ ಓರ್ವ ಯೋಧ ಮೃತಪಟ್ಟಿದ್ದರು.
ಈ ಕುರಿತು ಚರ್ಚಿಸಲು ಕಾಂಬೋಡಿಯಾದ ರಾಜನೀತಿಜ್ಞ ಹುನ್ ಸೇನ್ ಗೆ ಕರೆ ಮಾಡಿದ್ದ ಪೇಟಾಂಗ್ಟಾರ್ನ್ ಶಿನವತ್ರ, ಅವರನ್ನು ‘ಅಂಕಲ್’ ಎಂದು ಸಂಬೋಧಿಸಿ, ಓರ್ವ ಸೇನಾ ಕಮಾಂಡರ್ ರನ್ನು ತಮ್ಮ ಶತ್ರು ಎಂದು ಹೇಳಿರುವುದು ಸೋರಿಕೆಯಾಗಿರುವ ದೂರವಾಣಿ ಕರೆಯಿಂದ ಬಯಲಾಗಿತ್ತು. ಇದು ಪೇಟಾಂಗ್ಟಾರ್ನ್ ಶಿನವತ್ರರಿಗೆ ತಿರುಗುಬಾಣವಾಗಿತ್ತು.
ಪೇಟಾಂಗ್ಟಾರ್ನ್ ಶಿನವತ್ರ ಕಾಂಬೋಡಿಯಾಗೆ ತಲೆ ಬಾಗಿದ್ದಾರೆ ಹಾಗೂ ಸೇನೆಯ ಹಿತಾಸಕ್ತಿಯನ್ನು ಹೂತು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದ ಕನ್ಸರ್ವೇಟಿವ್ ಸಂಸದರು, ಪೇಟಾಂಗ್ಟಾರ್ನ್ ಶಿನವತ್ರ ಕಣ್ಣಿಗೆ ಕಾಣುವಂಥ ನಿಷ್ಠೆ ಹಾಗೂ ನೈತಿಕ ಮಾನದಂಡಗಳಂಥ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದೂ ದೂರಿದ್ದರು.







