ಪಾಪ್ ತಾರೆ ಟೇಲರ್ ಸ್ವಿಫ್ಟ್ ತಂದೆಯಿಂದ ಛಾಯಾಗ್ರಾಹಕನ ಮೇಲೆ ಹಲ್ಲೆ: ಆರೋಪ

Photo: twitter.com/taylorswift13
ಸಿಡ್ನಿ: ಜನಪ್ರಿಯ ಪಾಪ್ ತಾರೆ ಟೇಲರ್ ಸ್ವಿಫ್ಟ್ ಅವರ ತಂದೆ ಸ್ಕಾಟ್ ಸ್ವಿಫ್ಟ್ ಛಾಯಾಗ್ರಾಹಕನೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆ ಸಿಡ್ನಿಯ ನ್ಯೂಟ್ರಲ್ ಬೇ ವ್ರಾಫ್ನಲ್ಲಿ ಮಂಗಳವಾರ ಮುಂಜಾನೆ 2.30ರ ವೇಳೆಗೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾರೆ.
71 ವರ್ಷ ವಯಸ್ಸಿನ ಸ್ಕಾಟ್ ಸ್ವಿಫ್ಟ್, ಛಾಯಾಗ್ರಾಹಕ ಬೆನ್ ಮೆಕ್ಡೊನಾಲ್ಡ್ (51) ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಅಮೆರಿಕದ ಪಾಪ್ ಐಕಾನ್ ಸ್ವಿಫ್ಟ್, ಸಿಡ್ನಿ ನಗರದಲ್ಲಿ ನಾಲ್ಕು ಗಿಗ್ ಮುಗಿಸಿ ಬಂದರಿನಲ್ಲಿ "ಸೂಪರ್ ಯಾಚ್"ನಲ್ಲಿದ್ದ ಸಂದರ್ಭದಲ್ಲಿ ಮೆಕ್ಡೊನಾಲ್ಡ್ ಛಾಯಾಗ್ರಹಣ ಮಾಡುತ್ತಿದ್ದರು ಎನ್ನಲಾಗಿದೆ. ಸ್ವಿಫ್ಟ್ ಜೆಟ್ಟಿಯಿಂದ ವಾಹನದತ್ತ ಬರುತ್ತಿದ್ದಾಗ ಟೇಲರ್ ಸ್ವಿಫ್ಟ್ ಅವರ ಫೋಟೊ ಕ್ಲಿಕ್ಕಿಸದಂತೆ ಭದ್ರತಾ ಸಿಬ್ಬಂದಿ ತನ್ನ ಮುಖದ ಎದುರು ಛತ್ರಿಯನ್ನು ಹಿಡಿದಿದ್ದರು. ಸ್ವಿಫ್ಟ್ ಅಲ್ಲಿಂದ ತೆರಳಿದ ಬಳಿಕ ಆಕೆಯ ತಂದೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ಮೆಕ್ ಡೊನಾಲ್ಡ್ ದೂರಿದ್ದಾರೆ.
ಆ ವ್ಯಕ್ತಿ ಯಾರು ಎಂದು ತಿಳಿದಿರಲಿಲ್ಲ. ಆದರೆ ಸ್ವಿಫ್ಟ್ ಕೈ ಹಿಡಿದಿದ್ದ ಈ ವ್ಯಕ್ತಿ ಆಕೆಯ ತಂದೆ ಎನ್ನುವುದು ಆ ಮೇಲೆ ತಿಳಿಯಿತು. ಇದು ಆಘಾತಕಾರಿ. ಕಳೆದ 26 ವರ್ಷಗಳಲ್ಲಿ ಎಂದೂ ಹೀಗೆ ಆಗಿರಲಿಲ್ಲ ಎಂದು ಮೆಕ್ ಡೊನಾಲ್ಡ್ ಹೇಳಿದ್ದಾರೆ.
ಸ್ವಿಫ್ಟ್ ಪ್ರಸ್ತುತ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಎರಾಸ್ ಪ್ರವಾಸ ಕೈಗೊಂಡಿದ್ದಾರೆ.







