ಯಮನ್, ಸೊಮಾಲಿಯಾ ಬಳಿ 22 ಭಾರತೀಯರಿದ್ದ ಎರಡು ಹಡಗುಗಳನ್ನು ಅಪಹರಿಸಿದ ಕಡಲ್ಗಳ್ಳರು : ವರದಿ

ಸಾಂದರ್ಭಿಕ ಚಿತ್ರ | PTI
ಸನಾ,ಮೊಗದಿಶು: ಯಮನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯರಿದ್ದ ಎರಡು ವಾಣಿಜ್ಯ ಹಡಗುಗಳನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ hindustantimes.com ವರದಿ ಮಾಡಿದೆ.
ಆಫ್ರಿಕಾದ ಹಾರ್ನ್ ಪ್ರದೇಶದ ಸಮುದ್ರದಲ್ಲಿ ಕಡಲ್ಗಳ್ಳತನದ ಬೆದರಿಕೆ ಮತ್ತೆ ಹೆಚ್ಚುತ್ತಿರುವ ನಡುವೆಯೇ ಈ ಘಟನೆಗಳು ನಡೆದಿವೆ.
ಯಮನ್ನಲ್ಲಿ 16 ಭಾರತೀಯರಿದ್ದ ಹಡಗು ಅಪಹರಣ
ಎರಿಟ್ರಿಯಾ ಧ್ವಜ ಹೊಂದಿರುವ ತೈಲ ಉತ್ಪನ್ನಗಳ ಟ್ಯಾಂಕರ್ ಎಂಟಿ ಸಿಬು 1(M.T. Sibu 1 ಹಡಗನ್ನು ಯಮನ್ ಕರಾವಳಿಯಿಂದ ಸುಮಾರು 30 ನಾಟಿಕಲ್ ಮೈಲಿ ದೂರದಲ್ಲಿರುವ ಏಡನ್ ಕೊಲ್ಲಿಯಲ್ಲಿ ಆರು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರು ಅಪಹರಿಸಿದ್ದಾರೆ. ಹಡಗಿನಲ್ಲಿದ್ದ ಒಟ್ಟು 20 ಸಿಬ್ಬಂದಿಯಲ್ಲಿ 16 ಮಂದಿ ಭಾರತೀಯರಾಗಿದ್ದಾರೆ.
ಸಮುದ್ರ ಆಡಳಿತ ನಿರ್ದೇಶನಾಲಯ ಸಿದ್ಧಪಡಿಸಿರುವ ವರದಿ ಪ್ರಕಾರ, ಹಡಗಿನಲ್ಲಿದ್ದ ಎಲ್ಲಾ 20 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಬ್ಬಂದಿಯಲ್ಲಿ 16 ಭಾರತೀಯರು, ತಲಾ ಒಬ್ಬರು ಸಿರಿಯಾ, ಸುಡಾನ್ ಮತ್ತು ಇರಾಕ್ ದೇಶಗಳ ಪ್ರಜೆಗಳಾಗಿದ್ದು, ಮತ್ತೊಬ್ಬ ಸಿಬ್ಬಂದಿಯ ಪೌರತ್ವ ಇನ್ನೂ ದೃಢಪಟ್ಟಿಲ್ಲ.
ಘಟನೆಯ ಕುರಿತು ಇ-ನಾವಿಕ್ ಆn ವ್ಯವಸ್ಥೆಯ ಮೂಲಕ ನಿರಂತರ ಮಾಹಿತಿ ನೀಡುವಂತೆ ಸಂಬಂಧಿತ ನೇಮಕಾತಿ ಏಜೆನ್ಸಿಗೆ ಸೂಚಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಕೆಎಸ್ ಕೃಷಿವ್ ಮೆರೈನ್ ಸರ್ವಿಸಸ್ನ ಸುಮಿತ್ ಕಾಂತ್ ಸಿಂಗ್, ತಮ್ಮ ಸಂಸ್ಥೆಯು ನಾಲ್ವರು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು, ಅವರ ವಿವರಗಳನ್ನು ಸಮುದ್ರ ಆಡಳಿತ ನಿರ್ದೇಶನಾಲಯಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೊಮಾಲಿಯಾದಲ್ಲಿ 6 ಭಾರತೀಯರಿದ್ದ ಹಡಗು ಅಪಹರಣ
ಮತ್ತೊಂದು ಘಟನೆಯಲ್ಲಿ, ಸೊಮಾಲಿಯಾದ ಪುಂಟ್ಲ್ಯಾಂಡ್ ಕರಾವಳಿಯಲ್ಲಿ ಕ್ಯಾಮರೂನ್ ಧ್ವಜ ಹೊಂದಿರುವ ಎಂ/ವಿ ಲೂಟುಫ್ ಸರಕು ಸಾಗಣೆ ಹಡಗನ್ನು ಕಡಲ್ಗಳ್ಳರು ವಶಪಡಿಸಿಕೊಂಡಿದ್ದಾರೆ. ಹಡಗಿನಲ್ಲಿದ್ದ 10 ಮಂದಿ ಸಿಬ್ಬಂದಿಯಲ್ಲಿ ಆರು ಮಂದಿ ಭಾರತೀಯರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಳಿದವರಲ್ಲಿ ಒಬ್ಬ ಟರ್ಕಿ ಪ್ರಜೆ, ಒಬ್ಬ ಜಾರ್ಜಿಯಾ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದಾರೆ.
ಪೋಲಾರ್ ಮೂವ್ಮೆಂಟ್ ಶಿಪ್ಪಿಂಗ್ ಒಡೆತನದ ಈ ಹಡಗು ಮೊಗದಿಶುವಿನಲ್ಲಿರುವ ಟರ್ಕಿಶ್ ಮಿಲಿಟರಿ ತರಬೇತಿ ಕೇಂದ್ರಕ್ಕೆ ಶಸ್ತ್ರಾಸ್ತ್ರಗಳು, ಸಂವಹನ ಸಾಧನಗಳು ಹಾಗೂ ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿತ್ತು.
ಎಂಟು ಮಂದಿ ಕಡಲ್ಗಳ್ಳರು ಹಡಗನ್ನು ಪುಂಟ್ಲ್ಯಾಂಡ್ನ ಡಂಗೊರೊಯೊ ಜಿಲ್ಲೆಯ ಗರ್ಮಲ್ ಕರಾವಳಿಯತ್ತ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಹಡಗು, ಅದರಲ್ಲಿರುವ ಸಿಬ್ಬಂದಿ ಹಾಗೂ ಸರಕಿನ ಪ್ರಸ್ತುತ ಸ್ಥಿತಿಯ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.






