ಫ್ರಾನ್ಸ್ನಲ್ಲಿ ಸ್ಕೈಡೈವಿಂಗ್ ವಿಮಾನ ಪತನ; 11 ಮಂದಿ ಮೃತ್ಯು

Photo Credit : ANI
ಪ್ಯಾರಿಸ್: ಫ್ರಾನ್ಸ್ ನ ನ್ಯಾನ್ಸಿ ಸಮೀಪದ ಟೊಂಬ್ಲೇನ್ ಪ್ರದೇಶದಲ್ಲಿ ಸ್ಕೈಡೈವರ್ ಗಳ ಗುಂಪನ್ನು ಹೊತ್ತೊಯ್ಯುತ್ತಿದ್ದ ನಾಗರಿಕ ವಿಮಾನ ರವಿವಾರ ಅಪಘಾತಕ್ಕೀಡಾಗಿ 11 ಮಂದಿ ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫ್ರೆಂಚ್ ದಿನಪತ್ರಿಕೆ ಲೆ ಪ್ಯಾರಿಸಿಯನ್ ವರದಿ ಪ್ರಕಾರ, ಮೃತರಲ್ಲಿ ಐವರು ತರಬೇತುದಾರರು, ಐವರು ವಿದ್ಯಾರ್ಥಿಗಳು ಮತ್ತು ಓರ್ವ ಪೈಲಟ್ ಸೇರಿದ್ದಾರೆ ಎಂದು ಶಂಕಿಸಲಾಗಿದೆ. ತುರ್ತು ಸೇವಾ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ತನಿಖಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರು ನ್ಯಾನ್ಸಿ ಪ್ರದೇಶದ ಖಾಸಗಿ ಸೇವೆ ಸಲ್ಲಿಸುತ್ತಿದ್ದ ದಾದಿಯರಾಗಿದ್ದು, ಅವರು ಮೊದಲ ಬಾರಿಗೆ ಸ್ಕೈಡೈವಿಂಗ್ ಅನುಭವದಲ್ಲಿ ಭಾಗವಹಿಸುತ್ತಿದ್ದರು ಎಂದು ಮೆರ್ಥ್-ಎಟ್-ಮೊಸೆಲ್ಲೆ ಸ್ವತಂತ್ರ ದಾದಿಯರ ಸಂಘದ ಅಧ್ಯಕ್ಷ ಥಿಯೆರ್ರಿ ಪೆಚೆ ತಿಳಿಸಿದ್ದಾರೆ. ಮೃತರೆಲ್ಲರೂ ಖಾಸಗಿ ದಾದಿಯರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಪರಿಚಯಾತ್ಮಕ ಸ್ಕೈಡೈವಿಂಗ್ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಹಲವಾರು ಕುಟುಂಬ ಸದಸ್ಯರು ಈ ದುರಂತವನ್ನು ಕಣ್ಣಾರೆ ಕಂಡಿದ್ದಾರೆ. ಮೃತರ ಕುಟುಂಬಗಳಿಗೆ ನೆರವು ಒದಗಿಸಲು ಅಧಿಕಾರಿಗಳು ವೈದ್ಯಕೀಯ ಹಾಗೂ ಮಾನಸಿಕ ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಮೆರ್ಥ್-ಎಟ್-ಮೊಸೆಲ್ಲೆ ಪ್ರಾಂತ್ಯದ ಪ್ರಿಫೆಕ್ಟ್ ಯ್ವೆಸ್ ಸೆಗುಯ್ ಅವರ ಪ್ರಕಾರ, ಸ್ಕೈಡೈವಿಂಗ್ ಕ್ಲಬ್ಗೆ ಸೇರಿದ ವಿಮಾನವು ಹಠಾತ್ ನಿಯಂತ್ರಣ ತಪ್ಪಿ ನೇರವಾಗಿ ಕೆಳಕ್ಕೆ ಪತನಗೊಂಡಿದೆ. ಪೈಲಟ್ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದ ಯಾವುದೇ ಸುಳಿವುಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ವಿಮಾನವು ವಸತಿ ಪ್ರದೇಶದ ಸಮೀಪ ಪತನಗೊಂಡಿದ್ದರೂ, ಆ ಪ್ರದೇಶದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.






