ಭಾರತ-ಆಸ್ಟ್ರೇಲಿಯ ಸಂಬಂಧ ಅತ್ಯುತ್ತಮವಾಗಿದೆ : ಪ್ರಧಾನಿ ಮೋದಿ

ನರೇಂದ್ರ ಮೋದಿ | Photo Credit ; PTI
ಮೆಲ್ಬರ್ನ್, ಜು. 9: ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಸಂಬಂಧ ಅತ್ಯುನ್ನತ ಎತ್ತರವನ್ನು ತಲುಪಿದೆ ಎಂದು ಗುರುವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾಂಧವ್ಯವನ್ನು ಬಲಪಡಿಸುವಲ್ಲಿ ಆಸ್ಟ್ರೇಲಿಯದಲ್ಲಿ ನೆಲೆಸಿರುವ ಭಾರತೀಯ ವಲಸಿಗ ಸಮುದಾಯ ಬಹುದೊಡ್ಡ ಪಾತ್ರವನ್ನು ವಹಿಸಿದೆ ಎಂದು ಹೇಳಿದ್ದಾರೆ.
ಮೆಲ್ಬರ್ನ್ನಲ್ಲಿ ಭಾರತೀಯ ವಲಸಿಗ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಸಮುದಾಯದ ಸದಸ್ಯರ ದೈನಂದಿನ ದಿನಚರಿಯು ಅವರು ಭಾರತದೊಂದಿಗೆ ಸಂಪರ್ಕದಲ್ಲಿರುವಂತೆ ಮಾಡುತ್ತದೆ ಹಾಗೂ ಅವರು ಆಸ್ಟ್ರೇಲಿಯದ ಅಭಿವೃದ್ಧಿಗೂ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.
‘‘ನಾನು 2014 ರಲ್ಲಿ ಆಸ್ಟ್ರೇಲಿಯಕ್ಕೆ ಭೇಟಿ ನೀಡಿದ್ದಾಗ, ಅದು 28 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ನೀಡಿದ ಮೊದಲ ಭೇಟಿಯಾಗಿತ್ತು. ಇನ್ನೊಂದು ಭೇಟಿಗಾಗಿ ನೀವು ಮತ್ತೊಂದು 28 ವರ್ಷಗಳು ಕಾಯಬೇಕಾಗಿಲ್ಲ ಎಂದು ನಾನು ಅಂದು ಹೇಳಿದ್ದು ನಿಮಗೆ ನೆನಪಿರಬಹುದು. ಕಳೆದ 12 ವರ್ಷಗಳಲ್ಲಿ ಇದು ನನ್ನ ಮೂರನೇ ಭೇಟಿಯಾಗಿದೆ. ಹಾಗಾಗಿ, ಇದು ಭೇಟಿಗಳ ಹ್ಯಾಟ್ರಿಕ್. ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಸಂಬಂಧವು ತಲುಪಿರುವ ಅತ್ಯುನ್ನತ ಎತ್ತರವನ್ನು ಇದು ತೋರಿಸುತ್ತದೆ’’ ಎಂದು ಪ್ರಧಾನಿ ಮೋದಿ ಹೇಳಿದರು.
‘‘ಈ ಸಂಬಂಧ ವೃದ್ಧಿಯಲ್ಲಿ ಅತ್ಯಂತ ದೊಡ್ಡ ಪಾತ್ರ ವಹಿಸಿದ್ದು ಯಾರು ಗೊತ್ತಾ? ಅದು ಮೋದಿಯಲ್ಲ, ನೀವೆಲ್ಲರೂ’’ ಎಂದು ಅವರು ಬಣ್ಣಿಸಿದರು.
‘‘ನಾವು ಭೇಟಿಯಾಗುತ್ತಿರುವ ಈ ಜಮೀನಿನ ಸಾಂಪ್ರದಾಯಿಕ ಮಾಲೀಕರನ್ನು ನೆನೆಯುತ್ತಾ, ನಾನು ನನ್ನ ಮಾತುಗಳನ್ನು ಪ್ರಾರಂಭಿಸುತ್ತೇನೆ. ಅವರ ಹಿರಿಯರಿಗೆ, ಅವರ ಹಿಂದಿನ, ಈಗಿನ ಮತ್ತು ಮುಂದಿನ ತಲೆಮಾರುಗಳಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಜನ ಸೇರಿದ್ದಾರೆ. ಇದು ಭರ್ಜರಿ ಯಶಸ್ಸು ಕಂಡಿದೆ. ಇದಕ್ಕೂ ಮುನ್ನ ನಾನು ನಿಮ್ಮನ್ನೆಲ್ಲ ಸಿಡ್ನಿಯಲ್ಲಿ ಎರಡು ಬಾರಿ ಭೇಟಿಯಾಗಿದ್ದೆ. ಮೆಲ್ಬರ್ನ್ ಜನರನ್ನು ಭೇಟಿಯಾಗಲು ಸಹ ನಾನು ಕಾಯುತ್ತಿದ್ದೆ. ಹಾಗಾಗಿ ಈ ಬಾರಿ ಮೆಲ್ಬರ್ನ್ ಜನರೊಂದಿಗೆ ಕಾಫಿ ಕುಡಿಯೋಣ ಎಂದು ನಿರ್ಧರಿಸಿದೆ’’ ಎಂದರು.
‘‘ನೀವೆಲ್ಲರೂ ಪೂರ್ಣ ಉತ್ಸಾಹದಿಂದ ಆಸ್ಟ್ರೇಲಿಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದೀರಿ. ನಿಮ್ಮೆಲ್ಲರ ಬಗ್ಗೆ ನನಗೆ ಹೆಮ್ಮೆಯಿದೆ. ನಾವು ಭಾರತೀಯರು ಹಾಲಿನಲ್ಲಿ ಕರಗುವ ಸಕ್ಕರೆಯಂತೆ, ಅದನ್ನು ಇನ್ನಷ್ಟು ಸಿಹಿಯಾಗಿಸುತ್ತೇವೆ. ನಾವು ಭಾರತೀಯರು ಜಗತ್ತಿಗೆ ನಮ್ಮ ಪ್ರೀತಿಯ ಸಾರವನ್ನು ಪಸರಿಸುತ್ತಿರುತ್ತೇವೆ. ಮನೆಯಲ್ಲಿರುವ ಹಾಲು ಆಸ್ಟ್ರೇಲಿಯದ್ದಾಗಿರಬಹುದು, ಆದರೆ ತಯಾರಿಸುವ ಚಹಾ ಭಾರತೀಯ ಶೈಲಿಯದ್ದಾಗಿರುತ್ತದೆ. ಬೇಳೆಕಾಳುಗಳು ಮತ್ತು ತರಕಾರಿಗಳು ಆಸ್ಟ್ರೇಲಿಯದ್ದಾಗಿರಬಹುದು, ಆದರೆ ಅವುಗಳಿಗೆ ಅಪ್ಪಟ ಭಾರತೀಯ ಮಸಾಲೆಗಳ ಒಗ್ಗರಣೆ ಇರುತ್ತದೆ’’ ಎಂದು ಅವರು ಹೇಳಿದರು.






