ASEAN ಪ್ರವಾಸಿಗರಿಗೆ ಉಚಿತ ಇ-ವೀಸಾ | ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪ

ನರೇಂದ್ರ ಮೋದಿ | Photo Credit : PTI
ಮನಿಲಾ: ಭಾರತ ಮತ್ತು ಆಸಿಯಾನ್ ನಡುವಿನ ಸಂಬಂಧವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಉಪಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಆಸಿಯಾನ್ ರಾಷ್ಟ್ರಗಳ ಪ್ರವಾಸಿಗರಿಗೆ ಉಚಿತ ಎಲೆಕ್ಟ್ರಾನಿಕ್ ವೀಸಾ (ಇ-ವೀಸಾ), ದೀರ್ಘಾವಧಿಯ ಕಡಲ ಸಹಕಾರ ಯೋಜನೆ ಮತ್ತು ಪರಮಾಣು ಇಂಧನ ಹಾಗೂ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಯೋಗ ಸೇರಿವೆ ಎಂದು `ಪಿಟಿಐ' ವರದಿ ಮಾಡಿದೆ.
ಮಂಗಳವಾರ ಮನಿಲಾದಲ್ಲಿ ನಡೆದ 23ನೇ ಆಸಿಯಾನ್-ಭಾರತ ಶೃಂಗಸಭೆಯ ನಂತರ ಘೋಷಿಸಲಾದ ಈ ಪ್ರಸ್ತಾವನೆಗಳು, ಕಡಲ ವ್ಯವಹಾರಗಳು, ತಂತ್ರಜ್ಞಾನ, ಇಂಧನ, ಶಿಕ್ಷಣ, ಯುವ ವಿನಿಮಯ ಮತ್ತು ಪ್ರವಾಸೋದ್ಯಮದಲ್ಲಿ ಸಹಕಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ. ಸಂಪರ್ಕ, ವೈಜ್ಞಾನಿಕ ಸಂಶೋಧನೆ, ವಿಪತ್ತು ನಿರ್ವಹಣೆ, ಕರಾವಳಿ ರಕ್ಷಣಾ ಪಡೆ ಸಹಕಾರ, ಸಮುದ್ರದ ಚಟುವಟಿಕೆಗಳ ಜಾಗೃತಿ ಮತ್ತು ನಾವಿಕರ ಸುರಕ್ಷತೆಯನ್ನು ಒಳಗೊಂಡ ದೀರ್ಘಾವಧಿಯ ಆಸಿಯಾನ್-ಭಾರತ ಕಡಲ ಸಹಕಾರ ಯೋಜನೆಯನ್ನು ಮೋದಿ ಪ್ರಸ್ತಾಪಿಸಿದ್ದಾರೆ.
ಪ್ರಾದೇಶಿಕ ಸಾಮರ್ಥ್ಯವನ್ನು ಹೆಚ್ಚಿಸಲು ಜಂಟಿ ಸೈಬರ್ ಫೋರೆನ್ಸಿಕ್ ತರಬೇತಿ ಕಾರ್ಯಕ್ರಮ, ಪರಮಾಣು ಇಂಧನದಲ್ಲಿ ತಾಂತ್ರಿಕ ವಿನಿಮಯ, ಆಸಿಯಾನ್-ಭಾರತ ಬಾಹ್ಯಾಕಾಶ ಹ್ಯಾಕಥಾನ್ ಮತ್ತು ಗಣಿಗಾರಿಕೆ ಹಾಗೂ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರ, ಯುವಜನರ ನಡುವಿನ ಬಾಂಧವ್ಯವನ್ನು ಬಲಪಡಿಸಲು, ಯುವ ಶೃಂಗಸಭೆ, ಯುವ ಸಂಸದರ ನಡುವಿನ ವಿನಿಮಯ ಮತ್ತು ಸ್ಟಾರ್ಟ್-ಅಪ್ ಹ್ಯಾಕಥಾನ್ಗಳನ್ನು ಒಳಗೊಂಡ `ಆಸಿಯಾನ್-ಭಾರತ ಯೂತ್ ಕನೆಕ್ಟ್' ಉಪಕ್ರಮ.
ನಳಂದಾ ವಿಶ್ವವಿದ್ಯಾಲಯದಲ್ಲಿ ಆಸಿಯಾನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಹೆಚ್ಚಿಸುವುದು ಮತ್ತು 2027ರಲ್ಲಿ ನಡೆಯಲಿರುವ ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯಲ್ಲಿ ಆಸಿಯಾನ್-ಭಾರತ ಸೃಜನಶೀಲ ಪಾಲುದಾರಿಕೆ ಮಂಟಪವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನೂ ಮೋದಿ ಮುಂದಿಟ್ಟಿದ್ದಾರೆ. ಪ್ರಧಾನಿ ಮತ್ತು ಆಸಿಯಾನ್ ನಾಯಕರು ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು ಎಂದು ವರದಿ ತಿಳಿಸಿದೆ.






