ಸುದೀರ್ಘ ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗಬೇಕಾಗಿದೆ: ರಶ್ಯ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಂದೇಶ

ನರೇಂದ್ರ ಮೋದಿ , ವ್ಲಾಡಿಮಿರ್ ಪುಟಿನ್ | Photo Credit : PTI
ತಾಷ್ಕೆಂಟ್: ಕಿರ್ಗಿಸ್ತಾನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ನೇಪಥ್ಯದಲ್ಲಿ ಸೋಮವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಅವರು ಸುದೀರ್ಘ ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ನಾವು ಉಕ್ರೇನ್ ವಿಷಯದ ಬಗ್ಗೆ ನಿರಂತರವಾಗಿ ಚರ್ಚಿಸಿದ್ದೇವೆ. ಭಾರತವು ಶಾಂತಿಗಾಗಿ ನಡೆಯುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಮತ್ತು ಮುಂದೆಯೂ ಬೆಂಬಲಿಸುವುದನ್ನು ಮುಂದುವರಿಸುತ್ತದೆ. ಯುದ್ಧದಲ್ಲಿ ಕಳೆಯುವ ಪ್ರತಿಯೊಂದು ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ, ಆದರೆ ಶಾಂತಿಯತ್ತ ಇಡುವ ಪ್ರತಿಯೊಂದು ಹೆಜ್ಜೆಯೂ ಮಾನವೀಯತೆಯಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬುತ್ತದೆ. ನಾವು ಸುದೀರ್ಘ ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗಬೇಕಾಗಿದೆ. ಮಾನವೀಯತೆಯ ಕಲ್ಯಾಣಕ್ಕಾಗಿ ಇದು ಅತ್ಯಗತ್ಯ. ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಶಾಂತಿಯುತ ಪರಿಹಾರ ಕಂಡುಕೊಳ್ಳುವುದೇ ಮಾನವೀಯತೆಯ ಕರೆಯಾಗಿದೆ ಮತ್ತು ಇದೇ ಭಾರತದ ಸಂದೇಶವಾಗಿದೆ. ಗಾಂಧಿಯವರ ಭೂಮಿ ಮತ್ತು ಬುದ್ಧನ ಭೂಮಿ ಒಂದೇ ಸಂದೇಶವನ್ನು ಹಂಚಿಕೊಳ್ಳುತ್ತವೆ. ಅದೇ ಶಾಂತಿಯ ಮಾರ್ಗ. ಭಾರತ ಮತ್ತು ರಶ್ಯ ಎರಡಕ್ಕೂ ರಾಷ್ಟ್ರೀಯ ಹಿತಾಸಕ್ತಿಯೇ ಅತ್ಯುನ್ನತ ಆದ್ಯತೆಯಾಗಿ ಉಳಿದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಶ್ಯ ಮತ್ತು ಭಾರತ ನಡುವಿನ ಬಾಂಧವ್ಯ ಬಲಗೊಳ್ಳುತ್ತಿದ್ದು, ಪ್ರಧಾನಿ ಮೋದಿಯವರ ವೈಯಕ್ತಿಕ ಗಮನವು ಇದಕ್ಕೆ ಸಹಕಾರಿಯಾಗಿದೆ. ರಶ್ಯ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಹಕಾರವು ಧನಾತ್ಮಕ ಪ್ರವೃತ್ತಿಯನ್ನು ತೋರಿಸುತ್ತಿದ್ದು, ದ್ವಿಪಕ್ಷೀಯ ವ್ಯಾಪಾರ ವಹಿವಾಟು 2% ಕ್ಕಿಂತ ಹೆಚ್ಚು ಹೆಚ್ಚಾಗಿದೆ ಎಂದು ಪುಟಿನ್ ಹೇಳಿದರು.
ದ್ವಿಪಕ್ಷೀಯ ಸಭೆಯ ನಂತರ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಅವರು `ವಲ್ರ್ಡ್ ನೊಮ್ಯಾಡ್ ಗೇಮ್ಸ್'ನ ಉದ್ಘಾಟನಾ ಕಾರ್ಯಕ್ರಮಕ್ಕೆ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು.






