ಪೋಲಂಡ್: ವೈಮಾನಿಕ ಪ್ರದರ್ಶನ ಅಭ್ಯಾಸದ ವೇಳೆ ಎಫ್-16 ಸೇನಾ ವಿಮಾನ ಪತನ; ಪೈಲಟ್ ಮೃತ್ಯು

PC: x.com/PRWarRoom
ರ್ಯಾಡೋಮ್, ಪೋಲಂಡ್: ಪೋಲಂಡ್ ಸೇನೆಯ ಎಫ್-16 ಯುದ್ಧವಿಮಾನ ಕೇಂದ್ರ ಪೋಲಂಡ್ನ ರ್ಯಾಡೋಮ್ನಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಅಭ್ಯಾಸದಲ್ಲಿ ತೊಡಗಿದ್ದಾಗ ಪತನಗೊಂಡು ಪೈಲಟ್ ಮೃತಪಟ್ಟಿದ್ದಾರೆ ಎಂದು ಪೋಲಂಡ್ ಸೇನೆ ಪ್ರಕಟಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7.30ಕ್ಕೆ ಎಫ್-16 ವಿಮಾನ ಅಪ್ಪಳಿಸಿ ಈ ದುರಂತ ಸಂಭವಿಸಿದೆ.
ಪೋಲಂಡ್ ಉಪಪ್ರಧಾನಿ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ ವ್ಲಾದಿಸ್ಲೋವ್ ಕೊಸಿನಿಯಕ್-ಕಮೀಝ್ ಈ ಘಟನೆಯನ್ನು ದೃಢೀಕರಿಸಿ ಸಂತಾಪ ಸೂಚಿಸಿದ್ದಾರೆ.
"ಎಫ್-16 ಯುದ್ಧವಿಮಾನ ದುರಂತದಲ್ಲಿ ಪೋಲಂಡ್ ಸೇನೆಯ ಪೈಲಟ್ ಮೃತಪಟ್ಟಿದ್ದಾರೆ. ಇವರು ತಮ್ಮ ಸೇವೆಯುದ್ದಕ್ಕೂ ದೇಶಕ್ಕಾಗಿ ಸಮರ್ಪಣೆ ಮನೋಭಾವದಿಂದ ಮತ್ತು ಕೆಚ್ಚು ಮೆರೆದಿದ್ದರು. ಅವರ ಸ್ಮರಣೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ತೀವ್ರ ಸಂತಾಪ ಸೂಚಿಸುತ್ತಿದ್ದೇನೆ. ಇದು ಇಡೀ ಪೋಲಂಡ್ ಸೇನೆಗೆ ದೊಡ್ಡ ನಷ್ಟ" ಎಂದು ಅವರು ಎಕ್ಸ್ಪೋಸ್ಟ್ನಲ್ಲಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾಗಿ ಅವರು ವಿವರಿಸಿದ್ದಾರೆ. ಪ್ರಧಾನಿ ಡೊನಾಲ್ಡ್ ಟಸ್ಕ್ ಕೂಡಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪೋಲಂಡ್ ಸೇನೆ ಕೂಡಾ ಯೋಧನ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದು, ಇದು ಪೋಲಂಡ್ ಹಾಗೂ ಇಡೀ ಸಶಸ್ತ್ರ ಪಡೆಗಳಿಗೆ ದೊಡ್ಡ ನಷ್ಟ ಎಂದು ಬಣ್ಣಿಸಿದೆ. ಆದರೆ ಪೈಲಟ್ನ ಗುರುತು ಬಹಿರಂಗಪಡಿಸಿಲ್ಲ. ರಾಯ್ಟರ್ಸ್ ವರದಿ ಪ್ರಕಾರ, ಪೊಝಾನ್ ವಾಯುನೆಲೆಯ 31ನೇ ಟ್ಯಾಕ್ಟಿಕಲ್ ಏರ್ಬೇಸ್ಗೆ ಸೇರಿದ ವಿಮಾನ ದುರಂತಕ್ಕೀಡಾಗಿದೆ. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು, ತನಿಖೆ ನಡೆಯುತ್ತಿದೆ.





