ಪೋಲ್ಯಾಂಡ್ ನಲ್ಲಿ ರಾಜಕೀಯ, ಸಾಂವಿಧಾನಿಕ ಬಿಕ್ಕಟ್ಟು ಉಲ್ಬಣ | ಸಾಂವಿಧಾನಿಕ ನ್ಯಾಯಾಲಯದ ಮುಖ್ಯಸ್ಥರ ಅಮಾನತು; ಪ್ರತಿಭಟನೆ

Photo Credit : PTI
ವಾರ್ಸಾ, ಅ. 31: ಪೋಲ್ಯಾಂಡ್ ನ ಸಾಂವಿಧಾನಿಕ ನ್ಯಾಯಾಧಿಕರಣದ (ಟ್ರಿಬ್ಯೂನಲ್) ಮುಖ್ಯಸ್ಥ ಬೊಗ್ಡಾನ್ ಸ್ವಿಜ್ಕೋವ್ಸ್ಕಿ ಅವರ ಅಮಾನತಿನ ನಂತರ ಪೋಲ್ಯಾಂಡ್ ನಲ್ಲಿ ತೀವ್ರ ಸಾಂವಿಧಾನಿಕ ಮತ್ತು ರಾಜಕೀಯ ಬಿಕ್ಕಟ್ಟು ಭುಗಿಲೆದ್ದಿದೆ.
ಟ್ರಿಬ್ಯೂನಲ್ ಅಧ್ಯಕ್ಷ ಸ್ವಿಜ್ಕೋವ್ಸ್ಕಿ ಮತ್ತು ಉಪಾಧ್ಯಕ್ಷ ಬಾಟ್ರ್ಲೋಮಿಜ್ ಸೊಚಾನ್ಸ್ಕಿ ಅವರನ್ನು ಒಂದು ತಿಂಗಳ ಅವಧಿಗೆ ಕರ್ತವ್ಯದಿಂದ ಅಮಾನತುಗೊಳಿಸಿದ ನಂತರ ನ್ಯಾಯಾಧೀಶೆ ಅನ್ನಾ ಕಾರ್ವಿನ್-ಪಿಯೋಟ್ರೋವ್ಸ್ಕಾ ಅವರು ತಾತ್ಕಾಲಿಕವಾಗಿ ಸಂಸ್ಥೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದಾಗಿ ಘೋಷಿಸಿದರು. ಈ ಬೆಳವಣಿಗೆಯು ನ್ಯಾಯಾಲಯದ ಹೊರಗೆ ಪ್ರತಿಭಟನೆಗಳಿಗೆ ಕಾರಣವಾಯಿತು. ಕೆಲವರು ಪೊಲೀಸರ ಮೇಲೆ ವಸ್ತುಗಳನ್ನು ಎಸೆದ ಬಳಿಕ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿರೋಧ ಪಕ್ಷದ ಸದಸ್ಯರು ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಸರಕಾರವು ನ್ಯಾಯಾಂಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರೆ, ಟಸ್ಕ್ ಅವರು ಕಾನೂನಿನ ಆಡಳಿತವನ್ನು ಮರುಸ್ಥಾಪಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬೆಳವಣಿಗೆಗಳು ಸಂಭವಿಸಿದಾಗ ಅಧ್ಯಕ್ಷ ಕ್ಯಾರೋಲ್ ನಾವ್ರೊಕಿ ಅವರು ಸೆನೆಗಲ್ ಗೆ ಪ್ರಯಾಣಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಧ್ಯಕ್ಷರು ದೇಶದಲ್ಲೇ ಇರುವ ಅಗತ್ಯವಿದೆ ಎಂದು ಹೇಳಿದ ಅವರು, ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪೋಲ್ಯಾಂಡ್ ಗೆ ಹಿಂತಿರುಗುತ್ತಿರುವುದಾಗಿ ಘೋಷಿಸಿದರು. ಅಧ್ಯಕ್ಷರು ಪ್ರಯಾಣಿಸುತ್ತಿದ್ದ ವಿಮಾನ ಆಗಸದಲ್ಲೇ `ಯು-ಟರ್ನ್' ಹೊಡೆದು ಪೋಲ್ಯಾಂಡ್ ನತ್ತ ಹಿಂತಿರುಗಿತು.
ವಾರ್ಸಾಗೆ ಹಿಂತಿರುಗಿದ ನಂತರ, ನಾವ್ರೊಕಿ ಅವರು ಸುಪ್ರೀಂಕೋರ್ಟ್ ನ ಮೊದಲ ಅಧ್ಯಕ್ಷ ಜ್ಬಿಗ್ನಿವ್ ಕಾಪಿನ್ಸ್ಕಿ ಅವರೊಂದಿಗೆ ಸಾಂವಿಧಾನಿಕ ನ್ಯಾಯಾಧಿಕರಣದ ಕಟ್ಟಡವನ್ನು ಪ್ರವೇಶಿಸಿದರು ಎಂದು ವರದಿಯಾಗಿದೆ. ಬಲಪಂಥೀಯ ಲಾ ಆಂಡ್ ಜಸ್ಟಿಸ್ (ಪಿಐಎಸ್) ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅಧ್ಯಕ್ಷರು, ನ್ಯಾಯಾಂಗ ನೇಮಕಾತಿಗಳು ಮತ್ತು ಸುಧಾರಣೆಗಳ ವಿಷಯದಲ್ಲಿ ಟಸ್ಕ್ ಅವರ ಸರಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.
►ಪ್ರಧಾನಿ ಸಮರ್ಥನೆ
ಹಿಂದಿನ ಪಿಐಎಸ್ ಸರಕಾರದ ಅವಧಿಯಲ್ಲಿ ನಡೆದ ಅರಾಜಕತೆಯನ್ನು ಸರಿಪಡಿಸಲು ನಿರ್ಣಾಯಕ ಕ್ರಮ ಅಗತ್ಯ ಎಂದು ಪ್ರಧಾನಿ ಟಸ್ಕ್ ಈ ಬೆಳವಣಿಗೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾನೂನಿನ ಆಡಳಿತವನ್ನು ಮರುಸ್ಥಾಪಿಸುವುದು ನಮ್ಮ ಕರ್ತವ್ಯ. ಪಿಐಎಸ್ ನೇತೃತ್ವದ ವರ್ಷಗಳ ಅರಾಜಕತೆಯನ್ನು ಸರಿಪಡಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ. ಇದು ಕಷ್ಟಕರವಾದ ಪ್ರಕ್ರಿಯೆ, ಇದಕ್ಕೆ ಬೇರೆ ಮಾರ್ಗವಿಲ್ಲ ಎಂದು ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.






