ಕ್ರಿಸ್ತನ ಅನುಯಾಯಿಗಳು ಬಾಂಬ್ ಗಳನ್ನು ಬೀಳಿಸುವವರ ಪರವಾಗಿ ನಿಲ್ಲುವುದಿಲ್ಲ: ಪೋಪ್ ಲಿಯೋ

ಪೋಪ್ ಲಿಯೋ | Photo Credit ; PTI
ವ್ಯಾಟಿಕನ್, ಎ.10: ಜಾಗತಿಕ ಮಟ್ಟದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧಗಳನ್ನು ಖಂಡಿಸಿದ ಪೋಪ್ ಲಿಯೋ, ಸೇನಾ ಕಾರ್ಯಾಚರಣೆ ಶಾಂತಿ ಅಥವಾ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಅವರು, “ದೇವರು ಯಾವುದೇ ಸಂಘರ್ಷವನ್ನು ಆಶೀರ್ವದಿಸುವುದಿಲ್ಲ. ಶಾಂತಿದೂತ ಕ್ರಿಸ್ತನ ಅನುಯಾಯಿಗಳು ಬಾಂಬ್ ಗಳನ್ನು ಬೀಳಿಸುವವರ ಪರವಾಗಿ ನಿಲ್ಲುವುದಿಲ್ಲ” ಎಂದು ತಿಳಿಸಿದ್ದಾರೆ.
“ಸೇನಾ ಕಾರ್ಯಾಚರಣೆಯು ಶಾಂತಿ ಸೃಷ್ಟಿಸುವುದಿಲ್ಲ. ಜನರ ನಡುವೆ ಸಹಬಾಳ್ವೆ ಮತ್ತು ಸಂವಾದದ ತಾಳ್ಮೆಯ ಪ್ರಚಾರದ ಮೂಲಕ ಮಾತ್ರ ಶಾಶ್ವತ ಶಾಂತಿ ಸಾಧ್ಯ” ಎಂದು ಅವರು ಒತ್ತಿ ಹೇಳಿದ್ದಾರೆ.
ಲೆಬನಾನ್ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಗಳು ಹಾಗೂ ಇತರೆ ಜಾಗತಿಕ ಉದ್ವಿಗ್ನತೆಗಳ ನಡುವೆ ಪೋಪ್ ಅವರ ಈ ಹೇಳಿಕೆಗಳು ಗಮನ ಸೆಳೆದಿವೆ.
ಇದಕ್ಕೂ ಮುನ್ನ ಬುಧವಾರ ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮವನ್ನು ಪೋಪ್ ಲಿಯೋ ಸ್ವಾಗತಿಸಿದ್ದರು. ಸಂಘರ್ಷವನ್ನು ಕೊನೆಗೊಳಿಸಲು ಉಭಯ ಪಕ್ಷಗಳು ಮಾತುಕತೆಗೆ ಮರಳಬೇಕು ಎಂದು ಅವರು ಕರೆ ನೀಡಿದ್ದರು.
“ಈ ಸುದ್ದಿಯನ್ನು ತೃಪ್ತಿಯಿಂದ ಮತ್ತು ಆಳವಾದ ಭರವಸೆಯ ಸಂಕೇತವಾಗಿ ಸ್ವೀಕರಿಸಿದ್ದೇನೆ. ಮಾತುಕತೆಗೆ ಮರಳುವ ಮೂಲಕ ಮಾತ್ರ ಯುದ್ಧವನ್ನು ಅಂತ್ಯಗೊಳಿಸಲು ಸಾಧ್ಯ” ಎಂದು ಅವರು ಹೇಳಿದ್ದರು.







