Venezuela | ಜನರ ಒಳಿತೇ ಮೇಲುಗೈ ಸಾಧಿಸಬೇಕು: ಪೋಪ್ ಲಿಯೋ XIV ಕಳವಳ

ಪೋಪ್ ಲಿಯೋ XIV |Photo Credit : PTI
ವ್ಯಾಟಿಕನ್, ಜ.4: ವೆನೆಝುವೆಲಾದಲ್ಲಿ ಅಮೆರಿಕದ ಮಿಲಿಟರಿ ದಾಳಿಗಳ ಬಳಿಕ ಉಂಟಾಗಿರುವ ಬೆಳವಣಿಗೆಗಳ ಕುರಿತು ಪೋಪ್ ಲಿಯೋ XIV ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವೆನೆಝುವೆಲಾದ ಜನರ ಒಳಿತೇ ಎಲ್ಲದಕ್ಕಿಂತ ಮೇಲುಗೈ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.
It is with deep concern that I am following the developments in Venezuela. The good of the beloved Venezuelan people must prevail over every other consideration. This must lead to the overcoming of violence, and to the pursuit of paths of justice and peace. I pray for all this,…
— Pope Leo XIV (@Pontifex) January 4, 2026
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಪೋಪ್, ವೆನೆಝುವೆಲಾದ ಪರಿಸ್ಥಿತಿಯನ್ನು ತಾವು ನಿರಂತರವಾಗಿ ಗಮನಿಸುತ್ತಿರುವುದಾಗಿ ತಿಳಿಸಿದರು. “ವೆನೆಝುವೆಲಾದ ಬೆಳವಣಿಗೆಗಳನ್ನು ನಾನು ಆಳವಾದ ಕಳವಳದಿಂದ ನೋಡುತ್ತಿದ್ದೇನೆ. ಪ್ರೀತಿಯ ವೆನೆಝುವೆಲಾದ ಜನರ ಒಳಿತೇ ಇತರ ಎಲ್ಲ ಅಂಶಗಳಿಗಿಂತ ಮುಖ್ಯವಾಗಬೇಕು. ಇದು ಹಿಂಸಾಚಾರವನ್ನು ಮೀರಿಸಿ ನ್ಯಾಯ ಮತ್ತು ಶಾಂತಿಯ ಹಾದಿಯಲ್ಲಿ ಸಾಗಲು ದಾರಿ ಮಾಡಿಕೊಡಬೇಕು. ಇದಕ್ಕಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ವಿಶ್ವದಾದ್ಯಂತದ ಜನರು ಪ್ರಾರ್ಥನೆಗೆ ಕೈಜೋಡಿಸಬೇಕು”, ಎಂದು ಅವರು ಮನವಿ ಮಾಡಿದರು.
ಸೇಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿ ರವಿವಾರದ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಪೋಪ್ ಲಿಯೋ XIV, ವೆನೆಝುವೆಲಾ ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕೆಂದು ಕರೆ ನೀಡಿದರು. ದೇಶದ ಸಾರ್ವಭೌಮತ್ವವನ್ನು ಖಾತರಿಪಡಿಸುವ ಜೊತೆಗೆ, ಹಿಂಸಾಚಾರವನ್ನು ಮೀರಿಸಿ ನ್ಯಾಯ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗುವಲ್ಲಿ ವಿಳಂಬವಾಗಬಾರದು. ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿಂದೆ, ಟ್ರಂಪ್ ಆಡಳಿತದ ಕೆಲವು ಬಲಪಂಥೀಯ ನೀತಿಗಳನ್ನು ಪೋಪ್ ಲಿಯೋ XIV ಸಾರ್ವಜನಿಕವಾಗಿ ಟೀಕಿಸಿದ್ದರು. ಮಿಲಿಟರಿ ಬಲ ಪ್ರಯೋಗಿಸಿ ಮಡುರೊ ಅವರನ್ನು ಅಧಿಕಾರದಿಂದ ಪದಚ್ಯತಗೊಳಿಸುವುದನ್ನು ತಪ್ಪಿಸುವಂತೆ ಡಿಸೆಂಬರ್ ನಲ್ಲಿ ಅವರು ಅಮೆರಿಕ ಅಧ್ಯಕ್ಷರಿಗೆ ಮನವಿ ಮಾಡಿದ್ದರು.







