ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ: ಪೋಪ್ ಲಿಯೋ

ಪೋಪ್ ಲಿಯೋ | Photo Credit : PTI , AP
ಕ್ಯಾಮರೂನ್, ಎ.16: ಜಾಗತಿಕ ರಾಜಕೀಯ ಮತ್ತು ಯುದ್ಧ ಪರಿಸ್ಥಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್ ಲಿಯೋ, “ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ” ಎಂದು ಹೇಳಿದ್ದಾರೆ.
ಕ್ಯಾಮರೂನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗಳಿಗೆ ಶತಕೋಟಿ ಡಾಲರ್ ಗಳನ್ನು ಖರ್ಚು ಮಾಡುವ ಪ್ರವೃತ್ತಿಯನ್ನು ಖಂಡಿಸಿದರು. “ಕೆಲವೇ ನಿರಂಕುಶ ನಾಯಕರು ಜಗತ್ತನ್ನು ಧ್ವಂಸಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು.
ತಮ್ಮ ವಿರುದ್ಧ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ಬಳಿಕ ಪ್ರತಿಕ್ರಿಯಿಸಿದ ಪೋಪ್, “ಯುದ್ಧದ ಮಾಸ್ಟರ್ಸ್ ಗೆ ನಾಶಮಾಡಲು ಒಂದು ಕ್ಷಣ ಸಾಕು. ಆದರೆ ಪುನರ್ ನಿರ್ಮಾಣಕ್ಕೆ ಇಡೀ ಜೀವನ ಸಾಲದು ಎಂಬುದನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು.
“ಕೊಲೆ ಮತ್ತು ವಿನಾಶಕ್ಕೆ ಶತಕೋಟಿ ಹಣ ಖರ್ಚಾಗುತ್ತದೆ. ಆದರೆ ಚಿಕಿತ್ಸೆ, ಶಿಕ್ಷಣ ಮತ್ತು ಪುನರ್ ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲಗಳು ಎಲ್ಲಿಯೂ ಕಾಣುತ್ತಿಲ್ಲ” ಎಂದು ಪೋಪ್ ಲಿಯೋ ಅವರು ಬೇಸರ ವ್ಯಕ್ತಪಡಿಸಿದರು.
ಜಗತ್ತಿನ ನಾಯಕರು ಶಾಂತಿ, ಮಾನವೀಯತೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಪೋಪ್ ಲಿಯೋ ಕರೆ ನೀಡಿದರು.




