"ನನ್ನ ಯುದ್ಧ ವಿರೋಧಿ ನಿಲುವು ಮುಂದುವರಿಯಲಿದೆ": ಟ್ರಂಪ್ ಟೀಕೆಗೆ ಪೋಪ್ ಲಿಯೋ XIV ಪ್ರತಿಕ್ರಿಯೆ

ಪೋಪ್ ಲಿಯೋ XIV, ಡೊನಾಲ್ಡ್ ಟ್ರಂಪ್ (Photo Credit : AP / PTI)
ರೋಮ್/ಅಲ್ಜಿಯರ್ಸ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟೀಕೆಯ ನಡುವೆಯೂ ಯುದ್ಧದ ವಿರುದ್ಧವಾಗಿ ಮಾತನಾಡುವುದನ್ನು ಮುಂದುವರಿಸುವುದಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥ ಪೋಪ್ ಲಿಯೋ XIV ಹೇಳಿದ್ದಾರೆ.
ನಾಲ್ಕು ಆಫ್ರಿಕನ್ ದೇಶಗಳ 10 ದಿನಗಳ ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಅಲ್ಜಿಯರ್ಸ್ ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನಾನು ಅವರೊಂದಿಗೆ ಚರ್ಚೆ ಮಾಡಲು ಬಯಸುವುದಿಲ್ಲ. ಸುವಾರ್ತೆಯ ಸಂದೇಶವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದು ಸರಿಯಲ್ಲ” ಎಂದು ಪೋಪ್ ಅವರು ಅಭಿಪ್ರಾಯಪಟ್ಟರು.
ಕ್ರೈಸ್ತ ಧರ್ಮದ ಸಂದೇಶದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೋಪ್, “ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರಗಳನ್ನು ಹುಡುಕುವುದು, ಶಾಂತಿಯನ್ನು ಉತ್ತೇಜಿಸುವುದು, ರಾಷ್ಟ್ರಗಳ ನಡುವೆ ಸಂವಾದ ಮತ್ತು ಬಹುಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಅಗತ್ಯ. ಈ ಕಾರಣಕ್ಕಾಗಿ ನಾನು ಯುದ್ಧದ ವಿರುದ್ಧವಾಗಿ ಮಾತನಾಡುವುದನ್ನು, ಧ್ವನಿಯೆತ್ತುವುದನ್ನು ಮುಂದುವರಿಸುತ್ತೇನೆ” ಎಂದು ಹೇಳಿದರು.
“ಹಲವಾರು ನಿರಪರಾಧಿ ಜನರು ಕೊಲ್ಲಲ್ಪಡುತ್ತಿದ್ದಾರೆ. ಯುದ್ಧಕ್ಕಿಂತ ಉತ್ತಮ ಮಾರ್ಗವಿದೆ ಎಂದು ಧೈರ್ಯವಾಗಿ ಹೇಳುವ ಅಗತ್ಯವಿದೆ” ಎಂದು ಪೋಪ್ ಲಿಯೋ ಹೇಳಿದರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.






