ಗಾಝಾ ಕದನ ವಿರಾಮ ಪ್ರಸ್ತಾವನೆಗೆ ಹಮಾಸ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ

PC: X. com/CNN
ಗಾಝಾ: ಫೆಲೆಸ್ತೀನ್ ಹೋರಾಟಗಾರರ ಗುಂಪು ಹಮಾಸ್, ಗಾಝಾ ಕದನ ವಿರಾಮದ ಪ್ರಸ್ತಾವನೆಗೆ ಮಧ್ಯವರ್ತಿಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಲ್ಲಿಸಿದೆ ಎಂದು ಅಧಿಕೃತವಾಗಿ Telegramನಲ್ಲಿ ಘೋಷಿಸಿದೆ ಎಂದು Aljazeera ವರದಿ ಮಾಡಿದೆ.
ಫೆಲೆಸ್ತೀನ್ ಪಡೆಗಳು ಮತ್ತು ಬಣಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ತಮ್ಮ ಅಂತಿಮ ಪ್ರತಿಕ್ರಿಯೆಯನ್ನು ಹಮಾಸ್ ನೀಡಿದೆ ಎಂದು ತಿಳಿದು ಬಂದಿದೆ.
"ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವ ಮಧ್ಯವರ್ತಿಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಲ್ಲಿಸಿದ್ದು, ಈ ಚೌಕಟ್ಟನ್ನು ಜಾರಿಗೆ ತರುವ ಕಾರ್ಯವಿಧಾನಗಳ ಕುರಿತು ತಕ್ಷಣವೇ ಮುಂದಿನ ಮಾತುಕತೆಗೆ ಹಮಾಸ್ ಪೂರ್ಣ ಸಿದ್ಧವಾಗಿದೆ" ಎಂದು ಹಮಾಸ್ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಬಹುನಿರೀಕ್ಷಿತ ಪ್ರತಿಕ್ರಿಯೆಗಾಗಿ ಜಾಗತಿಕ ಮಟ್ಟದಲ್ಲಿ ನಿರಂತರ ಚರ್ಚೆಗಳು ನಡೆದಿದ್ದವು. ಹಮಾಸ್ ನ ಈ ಪ್ರತಿಕ್ರಿಯೆಯ ನಂತರವೂ ಗಾಝಾದ ನೆಲದಲ್ಲಿ ಈಗಾಗಲೇ ನಡೆಯುತ್ತಿರುವ ಸೈನಿಕ ಚಟುವಟಿಕೆಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ಕಂಡುಬಂದಿಲ್ಲ.
ಇಸ್ರೇಲ್ ಡ್ರೋನ್ ಗಳ ನಿರಂತರ ಹಾರಾಟ, ನೆರವು ವಿತರಣಾ ಕೇಂದ್ರಗಳಲ್ಲಿ ಆಹಾರದ ನಿರೀಕ್ಷೆಯಲ್ಲಿ ನಿಂತಿರುವ ಜನರ ಮೇಲೆ ನಡೆಯುತ್ತಿರುವ ಗುಂಡಿನ ದಾಳಿ ಮುಂದುವರೆದಿವೆ ಎಂದು ಸ್ಥಳೀಯ ಮೂಲಗಳು ವರದಿ ಮಾಡುತ್ತಿವೆ.
ಹಮಾಸ್ ನೀಡಿರುವ ಪ್ರತಿಕ್ರಿಯೆಯು ಶಾಂತಿ ಮಾತುಕತೆಗಳ ಮೂಲಕ ಕದನ ವಿರಾಮಕ್ಕೆ ದಾರಿ ಮಾಡಿಕೊಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೂ, ವಿಶ್ಲೇಷಕರು ಇದನ್ನು ಶಾಂತಿ ಕಡೆಗಿನ ಮೊದಲ ಹೆಜ್ಜೆಯೆಂದು ವಿವರಿಸುತ್ತಿದ್ದಾರೆ.
ಇಸ್ರೇಲ್ ಅಧಿಕಾರಿಗಳಿಂದ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಶಬ್ಬತ್(ಯಹೂದಿಗಳ ರಜಾ ದಿನ ಮತ್ತು ಆರಾಧನೆಗೆ ಸೀಮಿತವಾಗಿರುವ ದಿನ)ಹಿನ್ನೆಲೆ ಇದಕ್ಕೆ ಕಾರಣವಾಗಿರಬಹುದು. ಶನಿವಾರ ಇಸ್ರೇಲ್ ರಾಜಕಾರಣಿಗಳು ಸಾಮಾನ್ಯವಾಗಿ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ.
ಫೆಲೆಸ್ತೀನ್ ಗಾಝಾ ವಿಚಾರವಾಗಿ ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮವು ಕಳೆದ ಕೆಲವು ವಾರಗಳಿಂದ ತೀವ್ರ ಚರ್ಚೆಯ ವಿಷಯವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಶಾಂತಿ ಒಪ್ಪಂದಕ್ಕಾಗಿ ನಿರಂತರ ಒತ್ತಡ ಹೇರುತ್ತಿದ್ದರು. ಕದನ ವಿರಾಮ ಮಾತುಕತೆ ಯಾವುದೇ ಕ್ಷಣದಲ್ಲೂ ನಡೆಯಬಹುದು, ಸಿದ್ಧವಾಗಿರಿ, ಒಪ್ಪಂದಕ್ಕೆ ಬನ್ನಿ ಎಂದು ಅವರು ಹೇಳಿಕೆ ನೀಡುತ್ತಲೇ ಬಂದಿದ್ದರು.
ಹಮಾಸ್ ಪ್ರಸ್ತುತ ಒಪ್ಪಂದದ ಚೌಕಟ್ಟಿನಲ್ಲಿ "ಸಣ್ಣ ಬದಲಾವಣೆಗಳು" ಬೇಕೆಂದು ಮಾತ್ರ ಸೂಚಿಸಿದೆ ಎಂದು ಮೂಲಗಳು ಇಸ್ರೇಲ್ ಮಾಧ್ಯಮಗಳಿಗೆ ತಿಳಿಸಿವೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಅಂತ್ಯದ ಕುರಿತು ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಇಸ್ರೇಲ್ ಯುದ್ಧದ ಎರಡನೇ ಹಂತಕ್ಕೂ ಅವಕಾಶ ಇರಬೇಕೆಂದು ಬಲವಾಗಿ ಒತ್ತಾಯಿಸಿದರೆ, ಹಮಾಸ್ ಶಾಶ್ವತ ಕದನ ವಿರಾಮಕ್ಕೆ ಖಚಿತ ಭರವಸೆ ನೀಡಬೇಕೆಂದು ಪ್ರಮುಖ ಬೇಡಿಕೆ ಮುಂದಿಟ್ಟಿದೆ.
ಫೆಲೆಸ್ತೀನ್ ಪ್ರದೇಶದ ಮೇಲಿನ ಇಸ್ರೇಲ್ ಆಕ್ರಮಣವನ್ನು ಶಾಶ್ವತವಾಗಿ ಕೊನೆಗೊಳಿಸುವುದು ಹಮಾಸ್ ನ ಮುಖ್ಯ ಗುರಿಯಾಗಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಏನೆಲ್ಲಾ ಲಾಭ ಪಡೆಯುತ್ತದೆ ಎಂಬ ಪ್ರಶ್ನೆ ಇನ್ನೂ ಉತ್ತರರಹಿತವಾಗಿಯೇ ಉಳಿದಿದೆ.
ಪ್ರಸ್ತುತ, ಜಾಗತಿಕ ಸಮುದಾಯ ಮುಂದಿನ ಮಾತುಕತೆಗಳಿಗೆ ಕಾತುರದಿಂದ ಕಾಯುತ್ತಿದೆ. ಈ ಕದನ ವಿರಾಮ ಚರ್ಚೆಗಳು ಗಾಝಾದ ಜನತೆಗೆ ಶಾಂತಿ ತರುವುದೋ ಅಥವಾ ಗಾಝಾ ಮೇಲಿನ ದಾಳಿಗೆ ತಾತ್ಕಾಲಿಕ ತಡೆಯೊಡ್ಡುವುದೋ ಎಂಬ ಕುತೂಹಲ ಮೂಡಿದೆ.
Next Story