ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಮತ್ತೆ ದಾಳಿ ಸಾಧ್ಯತೆ | ಇಸ್ರೇಲ್ ಚುನಾವಣೆಗೂ ಮುನ್ನವೇ ದಾಳಿ ನಡೆಯುವ ನಿರೀಕ್ಷೆ: ವರದಿ

Photo Credit : aljazeera.com
ವಾಶಿಂಗ್ಟನ್, ಅ. 22: ಅಕ್ಟೋಬರ್ 27ರಂದು ನಡೆಯಲಿರುವ ಇಸ್ರೇಲ್ ಚುನಾವಣೆಗೆ ಮುನ್ನವೇ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಹಾಗೂ ದಾಳಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸಿವೆ ಎಂದು ಹಿರಿಯ ಇರಾನ್ ಅಧಿಕಾರಿಗಳು ಮತ್ತು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ಡ್ರಾಪ್ ಸೈಟ್’ ಗುರುವಾರ ವರದಿ ಮಾಡಿದೆ.
ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗಿರುವ ಹಾಗೂ ಮಧ್ಯಪ್ರಾಚ್ಯದತ್ತ ಹೆಚ್ಚುವರಿ ಅಮೆರಿಕದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿರುವ ಸಂದರ್ಭದಲ್ಲೇ ಈ ವರದಿ ಹೊರಬಿದ್ದಿದ್ದು, ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕವನ್ನು ಹುಟ್ಟುಹಾಕಿದೆ.
ಇರಾನ್ ವಿರುದ್ಧದ ಪ್ರಮುಖ ಸಮರ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಅದಕ್ಕೂ ಮುನ್ನವೇ ಮಿಲಿಟರಿ ಉಪಕರಣಗಳನ್ನು ನಿಗದಿತ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ. ಬೃಹತ್ ಸಮರ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
‘ಯುಎಸ್ಎಸ್ ಥಿಯೋಡೋರ್ ರೂಸ್ವೆಲ್ಟ್’ ವಿಮಾನವಾಹಕ ನೌಕೆ ಮತ್ತು 13ನೇ ಮೆರೀನ್ ಎಕ್ಸ್ಪೆಡಿಷನರಿ ಯುನಿಟ್ ಈ ಪ್ರದೇಶದತ್ತ ಸಾಗುತ್ತಿದ್ದು, ಸುಮಾರು 10,000 ಹೆಚ್ಚುವರಿ ನಾವಿಕರು ಮತ್ತು ನೌಕಾಪಡೆ ಸಿಬ್ಬಂದಿಯನ್ನು ಕರೆತರುತ್ತಿವೆ ಎಂದು ವರದಿ ತಿಳಿಸಿದೆ. ಈಗಾಗಲೇ ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ಇತರ ಎರಡು ವಿಮಾನವಾಹಕ ನೌಕೆಗಳು ಇವೆ.
ಆದರೆ, ಅಮೆರಿಕ ತಕ್ಷಣವೇ ಮಿಲಿಟರಿ ಕ್ರಮ ಕೈಗೊಳ್ಳಲಿದೆ ಎಂಬ ವರದಿಯನ್ನು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ತಳ್ಳಿಹಾಕಿದ್ದಾರೆ. ಅಮೆರಿಕದ ಮಧ್ಯಂತರ ಚುನಾವಣೆಗೂ ಮುನ್ನ ಯಾವುದೇ ಸಮಯದಲ್ಲಿ ಇರಾನ್ ಮೇಲೆ ಅಮೆರಿಕ ದಾಳಿ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.






