ವೆನೆಜುವೆಲಾದಲ್ಲಿ ಪ್ರಬಲ ಸರಣಿ ಭೂಕಂಪ; ಸುನಾಮಿ ಎಚ್ಚರಿಕೆ

Photo: x.com/ZiddiNaagrik
ಕಾರಕಾಸ್: ವೆನೆಜುವೆಲಾದಲ್ಲಿ ಬುಧವಾರ ರಾತ್ರಿ ಕೆಲವೇ ನಿಮಿಷಗಳ ಅವಧಿಯಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಕೆರೀಬಿಯನ್ ರಾಷ್ಟ್ರದ ರಾಜಧಾನಿ ಕಾರಾಕಸ್ನಲ್ಲಿ ಹಲವು ಕಟ್ಟಡಗಳು ಕುಸಿದು ಬಿದ್ದಿವೆ. ಸುನಾಮಿ ಅಪ್ಪಳಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಅಮೆರಿಕನ್ ಜಿಯಾಲಾಜಿಕಲ್ ಸರ್ವೆ ಪ್ರಕಾರ, 7.1 ತೀವ್ರತೆಯ ಭೂಕಂಪ ಸಂಜೆ 6.04ರ ವೇಳೆಗೆ ಕರಾವಳಿ ಪಟ್ಟಣವಾದ ಮೊರೋನ್ನಿಂದ ಪಶ್ಚಿಮದ ಮೊಂಟಾಲ್ಬೆನ್ ಎಂಬಲ್ಲಿ ಸಂಭವಿಸಿದೆ. ಈ ಭೂಕಂಪ ಸುಮಾರು 13 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಕೆಲವೇ ನಿಮಿಷಗಳಲ್ಲಿ ಮತ್ತೂ ಪ್ರಬಲವಾದ ಭೂಕಂಪ ಅದೇ ಭಾಗದಲ್ಲಿ ಸಂಭವಿಸಿದ್ದು, 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. 7.5 ತೀವ್ರತೆಯ ಭೂಕಂಪ ಎಂದು ಹೇಳಲಾಗಿದೆ.
ಈ ಭೂಕಂಪಗಳಿಂದ ವ್ಯಾಪಕ ಹಾನಿಯಾಗಿರಬಹುದು ಎಂದು ಯುಎಸ್ಜಿಎಸ್ ಅಂದಾಜಿಸಿದೆ. "ಭಾರಿ ಸಾವು-ನೋವು ಮತ್ತು ವ್ಯಾಪಕ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆಯಿದೆ" ಎಂದು ಹೇಳಿದೆ. ಆರಂಭಿಕ ಅಂದಾಜಿನ ಪ್ರಕಾರ, 10 ಸಾವಿರದಿಂದ ಒಂದು ಲಕ್ಷ ಮಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಹಾನಿ ಬಗ್ಗೆ ಅಧಿಕಾರಿಗಳು ಯಾವುದೇ ಅಂಕಿ-ಅಂಶ ಬಿಡುಗಡೆ ಮಾಡಿಲ್ಲ. ದೇಶಾದ್ಯಂತ ಕಂಪನದ ಅನುಭವವಾಗಿದ್ದು, ಪಕ್ಕದ ಕೊಲಂಬಿಯಾದಲ್ಲೂ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ. ಭೂಕಂಪದಿಂದ ವ್ಯಾಪಕ ಹಾನಿಯಾಗಿರುವುದನ್ನು ರಕ್ಷಣಾ ಸಚಿವ ಡ್ಯೂಸಾಡೊ ಕಬೆಲ್ಲೊ ದೃಢಪಡಿಸಿದ್ದಾರೆ.






