ಕೊಲಂಬಿಯಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ 47 ಜನರು ಮೃತ್ಯು, ಹಲವು ಕಟ್ಟಡಗಳು ನೆಲಸಮ

Photo Credit : AP
ಬೊಗೊಟ, ಆ.10: ಸೋಮವಾರ ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 47 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಮತ್ತು 30ಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ.
ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಬೊಗೊಟಾದಿಂದ ಪಶ್ಚಿಮಕ್ಕೆ ಸುಮಾರು 250 ಮೈಲಿ ದೂರದಲ್ಲಿರುವ ಚೊಕೊ ಪ್ರದೇಶದ `ಸಾನ್ಜೋಸ್ ಡೆಲ್ ಪಾಲ್ಮಾರ್' ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು. ಈ ಭೂಕಂಪವು 107 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಅಮೆರಿಕದ `ಜಿಯೊಲಾಜಿಕಲ್ ಸರ್ವೆ' ತಿಳಿಸಿದೆ.
ಪಶ್ಚಿಮ ನಗರವಾದ ಪಿರೇರಾದಲ್ಲಿ ಕನಿಷ್ಠ 47 ಜನರು ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 20 ಕಟ್ಟಡಗಳು ಕುಸಿದುಬಿದ್ದಿವೆ.
ನೆರೆಯ ಚೊಕೊ ಪ್ರಾಂತದ ಪ್ರಾದೇಶಿಕ ರಾಜಧಾನಿ ಕ್ವಿಬ್ಡೊದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಮತ್ತು ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ದೃಶ್ಯಗಳಲ್ಲಿ ಪಿರೇರಾ, ಕಾಲಿ ಮತ್ತು ಕ್ವಿಬ್ಡೊ ನಗರಗಳಲ್ಲಿ ಮನೆಗಳು ಮತ್ತು ಸಣ್ಣ ಕಟ್ಟಡಗಳು ಕುಸಿಯುತ್ತಿರುವುದು ಕಂಡುಬಂದಿದೆ. 20 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕಾಲಿ ನಗರದಲ್ಲಿ, ಕನಿಷ್ಠ 19 ಕುಸಿದ ಕಟ್ಟಡಗಳಲ್ಲಿ ನಿವಾಸಿಗಳು ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.
ಈ ಭೂಕಂಪದ ಆಘಾತ ನೆರೆಯ ಈಕ್ವೆಡಾರ್ನಲ್ಲೂ ಅನುಭವಕ್ಕೆ ಬಂದಿದೆ.






