ರಶ್ಯದ ವಿರುದ್ಧ ಯುದ್ಧ ಪ್ರಚೋದಿಸುವ ತಪ್ಪು ಮಾಡಬೇಡಿ: ಇಯುಗೆ ರಶ್ಯದ ಮಾಜಿ ಅಧ್ಯಕ್ಷ ಮೆಡ್ವೆಡೇವ್ ಎಚ್ಚರಿಕೆ

ಡಿಮಿಟ್ರಿ ಮೆಡ್ವೆಡೇವ್ |Credit :aljazeera.com
ಮಾಸ್ಕೋ, ಸೆ.29: ಯುರೋಪಿಯನ್ ಯೂನಿಯನ್(ಇಯು) ನಾಯಕರು ರಶ್ಯ ವಿರುದ್ಧ ಯುದ್ಧವನ್ನು ಪ್ರಚೋದಿಸುವ ತಪ್ಪು ಮಾಡಿದರೆ ಅದು `ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಜೊತೆಗಿನ' ಸಂಘರ್ಷವಾಗಿ ಉಲ್ಬಣಗೊಳ್ಳಬಹುದು ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
`ಜಡ ಯುರೋಪ್' ಸೇರಿದಂತೆ ರಶ್ಯಕ್ಕೆ ಇಂತಹ ಯುದ್ಧದ ಅಗತ್ಯವಿಲ್ಲ. ಯುರೋಪಿಯನ್ ಶಕ್ತಿಗಳು ರಶ್ಯದೊಂದಿಗೆ ಯುದ್ಧವನ್ನು ನಿಭಾಯಿಸಲು ಸಾಧ್ಯವಿಲ್ಲ. ಆದರೆ ಮಾರಣಾಂತಿಕ ಆಘಾತದ ಸಾಧ್ಯತೆ ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ ಮತ್ತು ಇಂತಹ ಸಂಘರ್ಷಗಳು ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಬಳಸುವ ಯುದ್ಧಗಳಾಗಿ ಉಲ್ಬಣಗೊಳ್ಳುವ ನಿಜವಾದ ಅಪಾಯವನ್ನು ಹೊಂದಿದೆ ' ಎಂದು ಅವರು ಟೆಲಿಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆಡ್ವೆಡೇವ್ ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ. ಉಕ್ರೇನ್ಗೆ ಬೆಂಬಲ ನೀಡುವ ಮೂಲಕ ನೇಟೋ ಮತ್ತು ಯುರೋಪಿಯನ್ ಯೂನಿಯನ್ ರಶ್ಯದ ವಿರುದ್ಧ ಯುದ್ಧ ಘೋಷಿಸಿದೆ ಎಂದು ಕಳೆದ ವಾರ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಆರೋಪಿಸಿದ್ದರು.
ನ್ಯೂಯಾರ್ಕ್ನಲ್ಲಿ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ್ದ ಅವರು ` ಪಾಶ್ಚಿಮಾತ್ಯ ಬಣಗಳು ಸಂಘರ್ಷದಲ್ಲಿ ನೇರವಾಗಿ ತೊಡಗಿಸಿಕೊಳ್ಳಲು ಸಹಾಯ ನೀಡುವ ಮೂಲಕ ಗೆರೆಯನ್ನು ದಾಟಿವೆ. ನೇಟೊ ಮತ್ತು ಯುರೋಪಿಯನ್ ಯೂನಿಯನ್ ನನ್ನ ದೇಶದ ಮೇಲೆ ಯುದ್ಧ ಘೋಷಿಸಿವೆ ಮತ್ತು ಅದರಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದೆ' ಎಂದು ಲಾವ್ರೋವ್ ಹೇಳಿದ್ದರು. ಇತ್ತೀಚಿಗೆ ರಶ್ಯದ ಡ್ರೋನ್ ಗಳು ಹಾಗೂ ಯುದ್ಧ ವಿಮಾನಗಳು ನೇಟೋ ಸದಸ್ಯರ ವಾಯುಕ್ಷೇತ್ರವನ್ನು ಉಲ್ಲಂಘಿವೆ ಎಂಬ ಆರೋಪದ ಬಳಿಕ ರಶ್ಯ, ನೇಟೊ ಮತ್ತು ಇಯು ನಡುವೆ ಉದ್ವಿಗ್ನತೆ ಹೆಚ್ಚಿದೆ.







