ಫ್ರಾನ್ಸ್ | ವಿಶ್ವಾಸಮತ ಯಾಚನೆಯಲ್ಲಿ ಪ್ರಧಾನಿ ಫ್ರಾಂಕಾಯಿಸ್ ಗೆ ಸೋಲು

ಫ್ರಾಂಕಾಯಿಸ್ ಬೈರೂವ್ | PC : NDTV
ಪ್ಯಾರಿಸ್,ಸೆ.10: ಫ್ರಾನ್ಸ್ ಪ್ರಧಾನಿ ಫ್ರಾಂಕಾಯಿಸ್ ಬೈರೂವ್ ಅವರು ಫ್ರೆಂಚ್ ಸಂಸತ್ ನಲ್ಲಿ ವಿಶ್ವಾಸಮತಯಾಚನೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರದಿಂದ ಕೆಳಗಿಳಿದಿದ್ದಾರೆ. ಫ್ರಾಂಕಾಯಿಸ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು 364-194 ಮತಗಳಿಂದ ಅಂಗೀಕರಿಸಲಾಯಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ಫ್ರಾಂಕಾಯಿಸ್ ಬೈರೊವ್ ಅವರು ಕೇವಲ 9 ತಿಂಗಳುಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶವು ಗಂಭೀರವಾದ ಸಾಲದ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವ ಅವರ ನಿಲುವಿಗೆ ಸರಕಾರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವ ತನ್ನ ನಿಲುವಿಗೆ ಬೆಂಬಲ ಕೋರಿ ಬೈರೂವ್ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿಶ್ವಾಸಮತ ಯಾಚಿಸಿದ್ದರು.
ಅಧಿಕಾರದಿಂದ ಬೈರೂವ್ ಅವರ ನಿರ್ಗಮನದೊದಿಗೆ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರು ನೂತನ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗಿ ಬಂದಿದೆ. ಈ ಮಧ್ಯೆ ಎಡಪಂಥೀಯ ನಾಯಕ ಜೀನ್-ಲ್ಯೂಕ್ ಮೆಲೆನ್ಚೊನ್ ಅವರು ಹೇಳಿಕೆಯೊಂದನ್ನು ನೀಡಿ, ಮ್ಯಾಕ್ರೊನ್ ಅವರು ಕೂಡಾ ಜನರನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.





