ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಟ್ರಂಪ್ರ ಪ್ರೇಯಸಿ : ಇಟಲಿ ರಾಜಕಾರಣಿಯ ವಿವಾದಾತ್ಮಕ ಹೇಳಿಕೆ

Photo credit:timesofindia
ರೋಮ್, ಅ.19: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ರೇಯಸಿ ಎಂದು ಉಲ್ಲೇಖಿಸುವ ಮೂಲಕ ಇಟಲಿಯ ಪ್ರಮುಖ ಕಾರ್ಮಿಕ ಸಂಘ `ಸಿಜಿಐಎಲ್'ನ ಅಧ್ಯಕ್ಷ ಮೌರಿಝಿಯೊ ಲ್ಯಾಂಡಿನಿ ವಿವಾದ ಸೃಷ್ಟಿಸಿದ್ದಾರೆ.
ಮಂಗಳವಾರ ಈಜಿಪ್ಟ್ನಲ್ಲಿ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆದ ಗಾಝಾ ಶಾಂತಿ ಸಭೆಯಲ್ಲಿ ಮೆಲೋನಿ ಕೂಡ ಪಾಲ್ಗೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಲ್ಯಾಂಡಿನಿ ` ಗಾಝಾದಲ್ಲಿ ಶಾಂತಿಯನ್ನು ತರುವ ನಿಟ್ಟಿನಲ್ಲಿ ಮೆಲೋನಿ ಒಂದು ಬೆರಳನ್ನೂ ಎತ್ತಿರಲಿಲ್ಲ. ಅವರ ಪಾತ್ರ ಕೇವಲ ಟ್ರಂಪ್ ಅವರ `ಪ್ರೇಯಸಿ ಪಾತ್ರಕ್ಕೆ' ಸೀಮಿತಗೊಂಡಿತ್ತು. ಆದರೆ ಅದೃಷ್ಟವಶಾತ್ ಫೆಲೆಸ್ತೀನೀಯರ ಪರ ಇಟಲಿಯ ಜನತೆ ಬೀದಿಗಿಳಿದಿದ್ದರಿಂದ ಇಟಲಿಯ ಘನತೆ ಮತ್ತು ಗೌರವಕ್ಕೆ ಧಕ್ಕೆ ಬರಲಿಲ್ಲ' ಎಂದು ಹೇಳಿಕೆ ನೀಡಿರುವುದಾಗಿ `ದಿ ಗಾರ್ಡಿಯನ್' ಪತ್ರಿಕೆ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಲೋನಿ ` ಇಟಲಿಯಲ್ಲಿ ಹಲವಾರು ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ಸಂಘಟಿಸಲು ಸಹಾಯ ಮಾಡಿದ ಲ್ಯಾಂಡಿನಿ ತಮ್ಮ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನದಿಂದ ದಿಗಿಲುಗೊಂಡಿರುವುದು ಸ್ಪಷ್ಟವಾಗಿದೆ' ಎಂದು ಹೇಳಿದ್ದಾರೆ.





