ಉಭಯ ದೇಶಗಳ ನಡುವೆ ನೂತನ ಅಧ್ಯಾಯಕ್ಕೆ ಮುನ್ನುಡಿ: ಮಾರಿಷಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ | PTI
ಪೋರ್ಟ್ ಲೂಯಿಸ್: ಮಾರಿಷಸ್ಗೆ ಎರಡು ದಿನಗಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಮಂಗಳವಾರ ಪೋರ್ಟ್ ಲೂಯಿಸ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮ್ಗೂಲಾಮ್ ಹಾರ್ದಿಕವಾಗಿ ಸ್ವಾಗತಿಸಿದರು.
ಮಾರಿಷಸ್ ಪ್ರಧಾನಿಯ ಆಹ್ವಾನದ ಮೇರೆಗೆ ಮಾರಿಷಸ್ಗೆ ಭೇಟಿ ನೀಡಿರುವ ನರೇಂದ್ರ ಮೋದಿ ಅಧ್ಯಕ್ಷ ಧರಂಬೀರ್ ಗೋಖೂಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮೋದಿ `ತಮ್ಮ ಭೇಟಿಯು ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಹೊಸ ಮತ್ತು ಪ್ರಕಾಶಮಾನವಾದ ಅಧ್ಯಾಯವನ್ನು ತೆರೆಯುತ್ತದೆ. ಮಾರಿಷಸ್ ಹಿಂದೂ ಮಹಾಸಾಗರದ ಪ್ರಮುಖ ಪಾಲುದಾರ ದೇಶ ಮತ್ತು ಆಫ್ರಿಕಾ ಖಂಡಕ್ಕೆ ಒಂದು ಹೆಬ್ಬಾಗಿಲು. ನಾವು ಇತಿಹಾಸ, ಭೌಗೋಳಿಕತೆ ಮತ್ತು ಸಂಸ್ಕೃತಿಯಿಂದ ಸಂಪರ್ಕ ಹೊಂದಿದ್ದೇವೆ. ಪರಸ್ಪರ ಆಳವಾದ ನಂಬಿಕೆ, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಹಂಚಿಕೆಯ ವಿಶ್ವಾಸ ಮತ್ತು ನಮ್ಮ ವೈವಿಧ್ಯತೆಯ ಆಚರಣೆಯು ನಮ್ಮ ಸಾಮರ್ಥ್ಯವಾಗಿದೆ' ಎಂದು ಹೇಳಿದರು. ಸರ್ ಸೀವುಸಾಗೂರ್ ರಾಮ್ಗೂಲಮ್ ಗಾರ್ಡನ್ನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಮಾರಿಷಸ್ ಪ್ರಧಾನಿ ರಾಮ್ಗೂಲಮ್ ಪಾಲ್ಗೊಂಡರು.
ಬುಧವಾರ ನಡೆಯಲಿರುವ ಮಾರಿಷಸ್ನ 57ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾರತೀಯ ಪ್ರಧಾನಿಯನ್ನು ಆಹ್ವಾನಿಸಲಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಭಾರತೀಯ ವಾಯುಪಡೆಯ ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದೊಂದಿಗೆ ಭಾರತದ ಸಶಸ್ತ್ರ ಪಡೆಗಳ ತಂಡವು ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದೆ.
ಮಾರಿಷಸ್ನ ಉನ್ನತ ನಾಯಕರ ಜತೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದು ಉಭಯ ದೇಶಗಳು ಸಾಮರ್ಥ್ಯ ವೃದ್ಧಿ, ವ್ಯಾಪಾರ ಮತ್ತು ಗಡಿಯಾಚೆಗಿನ ಆರ್ಥಿಕ ಅಪರಾಧಗಳನ್ನು ನಿಭಾಯಿಸುವ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಿವೆ.







