ಅಮೆರಿಕದ ಫ್ಲೋರಿಡಾದಲ್ಲಿ ಖಾಸಗಿ ಜೆಟ್ ವಿಮಾನ ಪತನ: ಒಂಭತ್ತು ಮಂದಿ ಮೃತ್ಯು
ವಸತಿ ಪ್ರದೇಶದ ಬಳಿ ನಡೆದ ಘಟನೆ; ಪತನಕ್ಕೂ ಮುನ್ನ ಪೈಲಟ್ ಗಳ ಆತಂಕಕಾರಿ ಸಂಭಾಷಣೆ ದಾಖಲು

Photo: x.com/JasADRxquisites
ಪಾಮ್ ಬೀಚ್ ಕೌಂಟಿ (ಫ್ಲೋರಿಡಾ), ನ. 2: ಅಮೆರಿಕದ ಫ್ಲೋರಿಡಾ ರಾಜ್ಯದ ದಕ್ಷಿಣ ಭಾಗದಲ್ಲಿ ಖಾಸಗಿ ಜೆಟ್ ವಿಮಾನವೊಂದು ವಸತಿ ಪ್ರದೇಶಕ್ಕೆ ಅಪ್ಪಳಿಸಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ವಿಮಾನವು ಮನೆಗಳು ಮತ್ತು ಕಾರುಗಳ ಸಮೀಪವೇ ಪತನಗೊಂಡರೂ ಆ ಪ್ರದೇಶದಲ್ಲಿದ್ದ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ರವಿವಾರ ಸಂಭವಿಸಿದ ಈ ಭೀಕರ ಅಪಘಾತವನ್ನು ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು 'ಭಯಾನಕ ದುರಂತ' ಎಂದು ಹೇಳಿದ್ದಾರೆ. ಅಪಘಾತದ ಕಾರಣ ಪತ್ತೆಹಚ್ಚಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ನಡೆಸಲಿದೆ. ತನಿಖೆಗೆ ನೆರವಾಗಲು ಫೆಡರಲ್ ವಿಮಾನಯಾನ ಆಡಳಿತದ (FAA) ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಡಫಿ ಸಾಮಾಜಿಕ ಜಾಲ ತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಪತನಕ್ಕೂ ಮುನ್ನ ಪೈಲಟ್ ಗಳ ಆತಂಕಕಾರಿ ಮಾತುಕತೆ
ವಿಮಾನ ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಕಾಕ್ ಪಿಟ್ ನಲ್ಲಿ ಪೈಲಟ್ ಗಳು ನಡೆಸಿದ ಸಂಭಾಷಣೆಯ ಧ್ವನಿಮುದ್ರಣವನ್ನು LiveATC.net ಸಂಗ್ರಹಿಸಿದೆ.
ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹವಾಗುತ್ತಿರುವ ಸಮಸ್ಯೆಯ ಬಗ್ಗೆ ಆರಂಭದಲ್ಲಿ ಪೈಲಟ್ ಮಾತನಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದೂ ಹೇಳಿದ್ದಾರೆ. ಆದರೆ, ಸ್ವಲ್ಪ ಸಮಯದಲ್ಲೇ ವಿಮಾನ ವೇಗವಾಗಿ ಕೆಳಕ್ಕೆ ಇಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಆತಂಕಗೊಂಡ ಸಿಬ್ಬಂದಿ, 'ನಾವು ನೆಲಕ್ಕೆ ಅಪ್ಪಳಿಸಲಿದ್ದೇವೆ!' ಎಂದು ಕೂಗಿದ್ದಾರೆ.
ಅಪಘಾತಕ್ಕೀಡಾದ ವಿಮಾನವು 'ಲಿಯರ್ಜೆಟ್ 60' ಮಾದರಿಯದ್ದಾಗಿದೆ. ಟೆಕ್ಸಾಸ್ ನ ಆಸ್ಟಿನ್ ನಿಂದ ಬಹಾಮಾಸ್ ಗೆ ತೆರಳುತ್ತಿದ್ದ ಈ ವಿಮಾನ ಖಾಸಗಿ ಜೆಟ್ ಎಂಬುದನ್ನು ಆಸ್ಟಿನ್-ಬರ್ಗ್ಸ್ಟ್ರೋಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೃಢಪಡಿಸಿದೆ. ಆದರೆ, ವಿಮಾನದಲ್ಲಿ ಯಾರೆಲ್ಲ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ನೀಡಿಲ್ಲ.
ನೆಲಕ್ಕೆ ಅಪ್ಪಳಿಸಿದ ಕ್ಷಣಕ್ಕೆ ಭಾರಿ ಸ್ಫೋಟ
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುಲ ವಿಡಿಯೊಗಳಲ್ಲಿ ವಿಮಾನವು ಅತ್ಯಂತ ವೇಗವಾಗಿ, ಮುಂಭಾಗ ಕೆಳಮುಖವಾಗಿರುವಂತೆ ನೆಲಕ್ಕೆ ಅಪ್ಪಳಿಸುವುದು ಕಂಡುಬಂದಿದೆ. ಅಪ್ಪಳಿಸಿದ ಕೂಡಲೇ ಭಾರಿ ಸ್ಫೋಟ ಸಂಭವಿಸಿದೆ. ಅಪಘಾತದ ಬಳಿಕ ವಿಮಾನದ ಅವಶೇಷಗಳು ಬಿದ್ದಿದ್ದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಘಟನಾ ಸ್ಥಳದಲ್ಲಿ ಜನರು ಓಡಾಡುತ್ತಿರುವುದೂ ವಿಡಿಯೊದಲ್ಲಿ ಕಂಡುಬಂದಿದೆ.
ವಿಮಾನವು ಮನೆಗಳು ಮತ್ತು ಕಾರುಗಳಿಂದ ಕೆಲವೇ ಮೀಟರ್ಗಳ ಅಂತರದಲ್ಲಿ ಪತನಗೊಂಡಿದೆ. ಆದರೂ ಅಲ್ಲಿದ್ದ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಡಿಸಾಂಟಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಮಾತನಾಡಿದ ಅವರು, ವಿಮಾನವು ಆಕಾಶದಿಂದ ಕೆಳಕ್ಕೆ ಬೀಳುತ್ತಿದ್ದ ಕ್ಷಿಪಣಿಯಂತೆ ಕಾಣುತ್ತಿತ್ತು. ರಸ್ತೆಯ ಪಕ್ಕದಲ್ಲಿ ದೊಡ್ಡ ಗುಂಡಿಯನ್ನೂ ಉಂಟುಮಾಡಿದೆ ಎಂದು ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ.






