ಜರ್ಮನಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ : ಇಸ್ರೇಲ್ಗೆ ಬೆಂಬಲ ವಿರೋಧಿಸಿ ಬೀದಿಗಿಳಿದ ಸಾವಿರಾರು ನಾಗರಿಕರು

PC ; aljazeera.com
ಬರ್ಲಿನ್,ಸೆ.27: ಗಾಝಾದ ಫೆಲೆಸ್ತೀನ್ ನಾಗರಿಕರ ಜೊತೆ ಏಕತೆಯನ್ನು ಪ್ರದರ್ಶಿಸಿ ಶನಿವಾರ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ಸಾವಿರಾರು ನಾಗರಿಕರು ಬೀದಿಗಿಳಿದು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸಿದರು. ಇಸ್ರೇಲ್-ಹಮಾಸ್ ಯುದ್ಧ ಅಂತ್ಯಕ್ಕೆ ಆಗ್ರಹಿಸಿದ ಪ್ರತಿಭಟನಕಾರರು, ‘ಫ್ರೀ, ಫ್ರೀ ಫೆಲೆಸ್ತೀನ್’ ಘೋಷಣೆಗಳನ್ನು ಕೂಗಿದರು. ಗಾಝಾದಲ್ಲಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ಅಂತ್ಯಗೊಳಿಸುವಂತೆಯೂ ಅವರು ಕರೆ ನೀಡಿದ್ದಾರೆ.
ಬರ್ಲಿನ್ನ ವಾಣಿಜ್ಯ ಪ್ರದೇಶದಲ್ಲಿ ನಡೆದ ಫೆಲೆಸ್ತೀನ್ ಪರ ಜಾಥಾದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ 100ಕ್ಕೂ ಅಧಿಕ ಕಾನೂನು ಅನುಷ್ಠಾನ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇಸ್ರೇಲ್ಗೆ ಜರ್ಮನಿಯ ಶಸ್ತ್ರಾಸ್ತ್ರ ರಫ್ತು ಮಾಡುವುದನ್ನು ನಿಷೇಧಿಸುವಂತೆ ಪ್ರತಿಭಟನಕಾರರು ಕರೆ ನೀಡಿದರು ಹಾಗೂ ಯುರೋಪ್ ಒಕ್ಕೂಟ ಕೂಡಾ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು ಎಂದು ಜರ್ಮನಿಯ ಡಿಪಿಎ ಸುದ್ದಿಸಂಸ್ಥೆ ವರದಿ ಮಾಡಿದೆ.
ಜರ್ಮನ್ ಸರಕಾರವು ಇಸ್ರೇಲ್ನ ಅತ್ಯಂತ ಪ್ರಬಲ ಬೆಂಬಲಿಗ ದೇಶಗಳಲ್ಲಿ ಒಂದಾಗಿದೆ. ಹಲವು ದಶಕಗಳಿಂದ ಅದು ಇಸ್ರೇಲ್ ಪರ ಧೋರಣೆಯನ್ನು ತಾಳುತ್ತಾ ಬಂದಿದೆ.
ಬರ್ಲಿನ್ನಲ್ಲಿ ನಡೆದ ಪ್ರತ್ಯೇಕ ಪ್ರತಿಭಟನೆಯೊಂದರಲ್ಲಿ ಸುಮಾರು 100 ಮಂದಿ ಇಸ್ರೇಲ್ ಪರವಾಗಿ ಪಾದಯಾತ್ರೆ ನಡೆಸಿದರು. ಎರಡೂ ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಹೊಕೈ ನಡೆಯಿತಾದರೂ, ಪೊಲೀಸರು ಅದನ್ನು ನಿಯಂತ್ರಿಸಿದರೆಂದು ಮೂಲಗಳು ತಿಳಿಸಿವೆ.





