ಮರ್ಯಂ ನವಾಝ್ ವಿರುದ್ಧ ಪ್ರತಿಭಟನೆ

ಮರ್ಯಮ್ ನವಾಝ್ | Photo: PTI
ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತದ ನೂತನ ಮುಖ್ಯಮಂತ್ರಿ, ಮಾಜಿ ಪ್ರಧಾನಿ ನವಾಝ್ ಷರೀಫ್ ಅವರ ಪುತ್ರಿ ಮರ್ಯಂ ನವಾಝ್ ವಿರುದ್ಧ ಲಾಹೋರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ ಘಟನೆ ರವಿವಾರ ನಡೆದಿದೆ.
ಲಾಹೋರ್ ನ ಐಚಿಸನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮರ್ಯಂ ಆಗಮಿಸಿದಾಗ ಕಾಲೇಜಿನ ಹೊರಗೆ ಸೇರಿದ್ದ ಗುಂಪು `ಕಳ್ಳರನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಘೋಷಣೆ ಕೂಗಿದೆ. ಜತೆಗೆ, ಜೈಲಿನಲ್ಲಿರುವ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖಂಡ ಇಮ್ರಾನ್ಖಾನ್ ಪರ ಘೋಷಣೆ ಕೂಗಿದೆ ಎಂದು ಸಿಎನ್ಎನ್-18 ಸುದ್ಧಿಸಂಸ್ಥೆ ವರದಿ ಮಾಡಿದೆ.
ಪ್ರತಿಷ್ಠಿತ ಐಚಿಸನ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಆಗ್ರಹಿಸಿ ಮರ್ಯಂಗೆ ಕಾಲೇಜಿನ ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸುಮಾರು 1,000 ಈ-ಮೇಲ್ ಬಂದಿದೆ. `ಕಳ್ಳರನ್ನು ಮುಖ್ಯ ಅತಿಥಿಗಳೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಈ-ಮೇಲ್ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.




