France | ಶಿಕ್ಷಣಕ್ಕೆ ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿ 2.66 ಲಕ್ಷ ಮಂದಿಯಿಂದ ಪ್ರತಿಭಟನೆ: 500 ಜನರು ಪೊಲೀಸ್ ವಶಕ್ಕೆ

Photo: PTI
ಪ್ಯಾರಿಸ್: ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿ ಪ್ರೌಢಶಾಲಾ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಫ್ರಾನ್ಸ್ ನಾದ್ಯಂತ ಮಂಗಳವಾರ 2.66 ಲಕ್ಷಕ್ಕೂ ಹೆಚ್ಚು ಮಂದಿ ರ್ಯಾಲಿ ನಡೆಸಿದರು. ಪ್ಯಾರಿಸ್ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಸುಮಾರು 500 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ವಿದ್ಯಾರ್ಥಿಗಳು ಪ್ರೌಢಶಾಲೆಗಳನ್ನು ಬಂದ್ ಮಾಡಿಸಿ, ಮಾರ್ಸೈಲ್, ಸ್ಟ್ರಾಸ್ಬರ್ಗ್ ಸೇರಿದಂತೆ ಹಲವು ನಗರಗಳಲ್ಲಿ ಧ್ವಜಗಳು ಮತ್ತು ಫಲಕಗಳನ್ನು ಹಿಡಿದು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟಿಸಿದರು. ಸೆಪ್ಟೆಂಬರ್ ಮಧ್ಯದಲ್ಲಿ ಪ್ಯಾರಿಸ್ ಪ್ರದೇಶದ ಪ್ರೌಢಶಾಲೆಯೊಂದರಲ್ಲಿ ಆರಂಭವಾದ ಪ್ರತಿಭಟನೆ ಇದೀಗ ದೇಶವ್ಯಾಪಿ ಚಳುವಳಿಯಾಗಿ ವಿಸ್ತರಿಸಿದೆ. ನಿರ್ಗಮಿತ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸುಮಾರು ಒಂದು ದಶಕದ ಆಡಳಿತದಲ್ಲಿ ನಡೆದ ಹಲವು ಪ್ರತಿಭಟನೆಗಳ ಸರಣಿಯಲ್ಲಿ ಇದು ಇತ್ತೀಚಿನದ್ದಾಗಿದೆ.
"ನಾವು ಅವರ ಮಾತುಗಳನ್ನು ಆಲಿಸಬೇಕು. ಅವರಿಗೆ 17 ವರ್ಷ. ಅವರು ಸಂಪೂರ್ಣವಾಗಿ ಅರಿವಿಲ್ಲದವರಲ್ಲ. ತಾವು ಏನು ಮಾತನಾಡುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿದೆ. ಅವರನ್ನು ಬೆಂಬಲಿಸುವ ವಯಸ್ಕರೂ ಇದ್ದಾರೆ ಎಂಬುದನ್ನು ತೋರಿಸುವುದು ಮುಖ್ಯ" ಎಂದು ಉತ್ತರದ ಲಿಲ್ ನಗರದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಲಿಯಾ ಮೊನಿಮಾರ್ಟ್ ಹೇಳಿದರು.
ಮಂಗಳವಾರ ದೇಶದಾದ್ಯಂತ 2,66,000 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಗೃಹ ಸಚಿವಾಲಯ ಅಂದಾಜಿಸಿದೆ. ಪ್ಯಾರಿಸ್ ನಲ್ಲಿ 56,000 ಮಂದಿ ಪಾಲ್ಗೊಂಡಿದ್ದರು. ಇಲ್ಲಿ ಬಹುತೇಕ ಶಾಂತಿಯುತವಾಗಿ ನಡೆದ ಮೆರವಣಿಗೆಯ ಕೊನೆಯಲ್ಲಿ ನಗರದ ಚೌಕವೊಂದರಲ್ಲಿ ಪ್ರತಿಭಟನಾಕಾರರ ಸಣ್ಣ ಗುಂಪುಗಳು ಗಲಭೆ ನಿಯಂತ್ರಣ ಪೊಲೀಸರೊಂದಿಗೆ ಘರ್ಷಣೆ ನಡೆಸಿದವು ಎಂದು ತಿಳಿದು ಬಂದಿದೆ.
ಸುಮಾರು 500 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಂಧಿಸಿರುವುದು, ಪೊಲೀಸರು ಅಶ್ರುವಾಯು ಹಾಗೂ ಗಲಭೆ ನಿಯಂತ್ರಣಾ ಅಸ್ತ್ರಗಳನ್ನು ವ್ಯಾಪಕವಾಗಿ ಬಳಸಿರುವುದು ಟೀಕೆಗೆ ಕಾರಣವಾಗಿದೆ. ಈ ಕ್ರಮದಿಂದ ಕೆಲವು ಪೋಷಕರು ಮತ್ತು ಶಿಕ್ಷಕರೂ ಆಕ್ರೋಶಗೊಂಡಿದ್ದಾರೆ. ಪ್ರತಿಭಟನೆ ಮುಂದುವರಿಸುವುದಾಗಿ ಕೆಲವು ವಿದ್ಯಾರ್ಥಿ ಸಂಘಟನೆಗಳು ಘೋಷಿಸಿದ್ದು, ಗುರುವಾರ ಮತ್ತೊಂದು ಪ್ರತಿಭಟನೆಗೆ ಕರೆ ನೀಡಿವೆ.
ಪೊಲೀಸರ ಕ್ರಮವು "ಬಹುತೇಕ ಎಲ್ಲ ಸಂದರ್ಭಗಳಲ್ಲೂ" ಸೂಕ್ತವಾಗಿತ್ತು ಎಂದು ಗೃಹ ಸಚಿವ ಲಾರೆಂಟ್ ನುನೆಜ್ ಸಮರ್ಥಿಸಿಕೊಂಡಿದ್ದಾರೆ. ಪ್ರತಿಭಟನೆಗಳು ಕೆಲವೊಮ್ಮೆ ಗಲಭೆಯಾಗಿ ಮಾರ್ಪಟ್ಟಿದ್ದರಿಂದ ಪೊಲೀಸರ ಹಸ್ತಕ್ಷೇಪ ಅಗತ್ಯವಾಗಿತ್ತು ಎಂದು ಹೇಳಿದ್ದಾರೆ.
ಸರಕಾರ ಮತ್ತು ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳ ಆತಂಕಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಹೇಳಿದ್ದಾರೆ.
ಮಂಗಳವಾರ ಸಂಸತ್ತಿನಲ್ಲಿ ಪ್ರತಿಭಟನಾ ಚಳುವಳಿ ಕುರಿತು ಪ್ರಶ್ನಿಸಿದಾಗ, ಶಾಲೆಗಳಿಗೆ ಬೆದರಿಕೆ ಹಾಕುವ "ಅತಿಯಾದ ಹಿಂಸಾಚಾರ"ವನ್ನು ಲೆಕೋರ್ನು ಖಂಡಿಸಿದರು. ಪೊಲೀಸರ ಕಾರ್ಯತಂತ್ರಗಳ ಕುರಿತ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ "ಅಹಿತಕರ ಘಟನೆಗಳ" ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಪೊಲೀಸರು ವರ್ಣಭೇದ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪವನ್ನು "ಸುಳ್ಳು" ಎಂದು ತಳ್ಳಿಹಾಕಿದರು.
ಎರಡು ವಾರಕ್ಕೂ ಹೆಚ್ಚು ಕಾಲ ನಡೆಯುತ್ತಿರುವ ತರಗತಿ ಬಹಿಷ್ಕಾರ ಮತ್ತು ಶಾಲೆಗಳ ತಡೆ, ಪೊಲೀಸ್ ಕ್ರಮದ ಭಾಗವಾಗಿ ನಡೆದ 6,500ಕ್ಕೂ ಹೆಚ್ಚು ಬಂಧನಗಳು ಅಧ್ಯಕ್ಷೀಯ ಚುನಾವಣಾ ಪ್ರಚಾರದ ಆರಂಭಿಕ ದಿನಗಳಲ್ಲಿ ಪ್ರಮುಖ ವಿವಾದವಾಗಿ ಪರಿಣಮಿಸಿವೆ. ಬಂಧಿತರಲ್ಲಿ ಬಹುಪಾಲು ಅಪ್ರಾಪ್ತರು.
ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೆಲಿಕ್ಸ್ ಬಾರ್ನಿ ಪೊಲೀಸರ ಕ್ರಮವನ್ನು ಅತಿಯಾದದ್ದು ಎಂದು ಟೀಕಿಸಿದರು. "ಅಪ್ರಾಪ್ತರ ಮೇಲೆ ಹಲ್ಲೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಹೇಳಿದರು.
"ಗಲಭೆ ನಿಯಂತ್ರಣ ಪೊಲೀಸರು, ಲಾಠಿಗಳು, ರಬ್ಬರ್ ಗುಂಡುಗಳು ಮತ್ತು ಅಶ್ರುವಾಯು ಪ್ರಯೋಗಿಸಲಾಗುತ್ತಿದೆ" ಎಂದು 'ಫ್ರಾನ್ಸ್ ಅನ್ಬೋವ್ಡ್' ಪಕ್ಷದ ಶಾಸಕ ಔರೇಲಿಯನ್ ಲೆ ಕಾಕ್ ಆರೋಪಿಸಿದರು. ತೀವ್ರ ಎಡಪಂಥೀಯ ಪಕ್ಷವಾಗಿರುವ ಇದರ ಅಧ್ಯಕ್ಷೀಯ ಅಭ್ಯರ್ಥಿ ಪ್ರತಿಭಟನೆಗಳನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ. ಹಿಂಸಾಚಾರ "ಸಂಪೂರ್ಣವಾಗಿ ಅಸಹನೀಯ" ಎಂದು ಲೆ ಕಾಕ್ ಹೇಳಿದರು.
ಪೊಲೀಸರ ಗಲಭೆ ನಿಯಂತ್ರಣಾ ಅಸ್ತ್ರಗಳಿಂದ ಗಂಭೀರ ಗಾಯಗಳಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದರೂ ನುನೆಜ್ ಪೊಲೀಸರ ಕಾರ್ಯತಂತ್ರವನ್ನು ಸಮರ್ಥಿಸಿಕೊಂಡಿದ್ದಾರೆ. ಸೋಮವಾರ ಪೊಲೀಸ್ 'ಸ್ಟನ್ ಗ್ರೆನೇಡ್' ಬಳಕೆಯಾದ ಸಂದರ್ಭದಲ್ಲಿ 15 ವರ್ಷದ ಬಾಲಕನೊಬ್ಬ ಕೈ ಕಳೆದುಕೊಂಡಿದ್ದಾನೆ. ಘರ್ಷಣೆಗಳಲ್ಲಿ 715 ಪೊಲೀಸರು ಗಾಯಗೊಂಡಿದ್ದಾರೆ ಎಂದು ನುನೆಜ್ ತಿಳಿಸಿದ್ದಾರೆ.
ಫ್ರಾನ್ಸ್ನಲ್ಲಿ ವ್ಯಾಪಕ ಅಸಮಾಧಾನದ ನಡುವೆಯೇ ಹದಿಹರೆಯದ ಪ್ರತಿಭಟನಾಕಾರರ ಧ್ವನಿ ಜನರ ಗಮನ ಸೆಳೆದಿದೆ. ಇರಾನ್ ಯುದ್ಧದಿಂದ ಏರಿಕೆಯಾದ ಇಂಧನ ಬೆಲೆಗಳಂತಹ ತಕ್ಷಣದ ಸಮಸ್ಯೆಗಳ ಜತೆಗೆ, ಮ್ಯಾಕ್ರನ್ ಆಡಳಿತದಲ್ಲಿ ಸಾರ್ವಜನಿಕ ವೆಚ್ಚದ ಮೇಲಿನ ನಿರ್ಬಂಧ, ಹೆಚ್ಚುತ್ತಿರುವ ಬಡತನ ಮತ್ತು ಸಂಪತ್ತಿನ ಅಸಮಾನತೆಯ ಬಗ್ಗೆಯೂ ಜನರಲ್ಲಿ ಅಸಮಾಧಾನವಿದೆ. ಮ್ಯಾಕ್ರನ್ ಸತತ ಮೂರನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.
ಶಿಕ್ಷಣಕ್ಕೆ ಮೀಸಲಿಡುವ ಅನುದಾನದ ಕೊರತೆ ತಮ್ಮ ಭವಿಷ್ಯಕ್ಕೆ ಅಪಾಯ ಉಂಟುಮಾಡುತ್ತಿದೆ ಎಂಬ ವಿದ್ಯಾರ್ಥಿಗಳ ದೂರಿಗೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಿದೆ.
ಪ್ಯಾರಿಸ್ನ ಶಾಲೆಯೊಂದರ ಹೊರಗೆ ಲೋಹದ ತಡೆಗೋಡೆಗೆ ಅಂಟಿಸಲಾಗಿದ್ದ ಕೈಬರಹದ ಫಲಕದಲ್ಲಿ, "ಯುವಕರೇ ಭವಿಷ್ಯ ಎಂದು ನೀವು ಹೇಳುತ್ತೀರಿ, ಹಾಗಾದರೆ ಅವರ ಮಾತನ್ನು ಆಲಿಸಿ" ಎಂದು ಬರೆಯಲಾಗಿತ್ತು.
ದೂರುಗಳಿಗಾಗಿ ಆನ್ಲೈನ್ ಪೋರ್ಟಲ್
ಪ್ಯಾರಿಸ್ನ 20ನೇ ಜಿಲ್ಲೆಯಲ್ಲಿರುವ 'ಹೆಲೆನ್ ಬೌಚರ್' ಪ್ರೌಢಶಾಲೆಯಲ್ಲಿ ಪ್ರತಿಭಟನಾಕಾರರು ಕಸದ ತೊಟ್ಟಿಗಳು ಮತ್ತು ಬೈಸಿಕಲ್ ಗಳನ್ನು ಅಡ್ಡಲಾಗಿ ಇಟ್ಟು ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದರು.
ದೇಶಾದ್ಯಂತದ ನೂರಾರು ಶಾಲೆಗಳಂತೆ ಈ ಶಾಲೆಯನ್ನೂ ಮುಚ್ಚಲಾಗಿತ್ತು. ಶಾಲೆಗಳಿಗೆ ವ್ಯಾಪಕ ಹಾನಿ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೊಲೀಸರಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರತಿಭಟನೆಯ ತೀವ್ರತೆಯನ್ನು ತಗ್ಗಿಸಲು ಅಧಿಕಾರಿಗಳು ಕಳೆದ ವಾರದಿಂದಲೇ ಶಾಲೆಗಳನ್ನು ಮುಚ್ಚಲು ಆರಂಭಿಸಿದ್ದರು.
ಶಿಕ್ಷಣ ಸಚಿವಾಲಯದ ಪ್ರಕಾರ ಮಂಗಳವಾರ 891 ಶಾಲೆಗಳಲ್ಲಿ ತರಗತಿಗಳು ಸಂಪೂರ್ಣವಾಗಿ ಅಥವಾ ಭಾಗಶಃ ಸ್ಥಗಿತಗೊಂಡಿದ್ದವು.
ಪ್ರತಿಭಟನಾಕಾರರನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಸಚಿವಾಲಯವು, ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಬಯಸುವ ಬದಲಾವಣೆಗಳ ಕುರಿತು ಅನಾಮಧೇಯವಾಗಿ ಮಾಹಿತಿ ನೀಡಲು ಆನ್ಲೈನ್ ಪೋರ್ಟಲ್ ಆರಂಭಿಸಿದೆ.
ವಿದ್ಯಾರ್ಥಿಗಳ ಪ್ರತಿಭಟನೆಗಳು ಶಿಥಿಲಗೊಂಡಿರುವ ತರಗತಿ ಕೊಠಡಿಗಳ ಸಮಸ್ಯೆಯನ್ನೂ ಮುನ್ನೆಲೆಗೆ ತಂದಿವೆ.
'ಹೆಲೆನ್ ಬೌಚರ್' ಶಾಲೆಯಲ್ಲಿ ಮಂಗಳವಾರ ಪೋಷಕರು ಮತ್ತು ಇತರ ವಯಸ್ಕರು ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನಿಂತು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದರು.
"ಅವರು ನಮ್ಮ ಮಕ್ಕಳು. ಶಿಕ್ಷಕರು, ಪೋಷಕರು ಮತ್ತು ಸಂಘಟನೆಗಳು—ನಾವೆಲ್ಲರೂ ಮಕ್ಕಳ ಹಕ್ಕುಗಳ ರಕ್ಷಣೆಯ ಒಂದೇ ಗುರಿ ಹೊಂದಿದ್ದೇವೆ. ಪ್ರತಿಭಟಿಸುವುದು ಮತ್ತು ಬೇಡಿಕೆಗಳನ್ನು ಮಂಡಿಸುವುದು ನ್ಯಾಯಸಮ್ಮತ ಹಕ್ಕು" ಎಂದು ಪೋಷಕರ ಸಂಘವೊಂದರ ಸದಸ್ಯೆ ಎಮಿಲಿಯಾ ಸಿಚಿಲಿ ಸುರಿಯಾಮ್ ಹೇಳಿದರು.
ಶಿಥಿಲ ತರಗತಿ ಕೊಠಡಿ, ಸಿಬ್ಬಂದಿ ಕೊರತೆ
ಫ್ರಾನ್ಸ್ ನ ರಾಷ್ಟ್ರೀಯ ಧ್ಯೇಯವಾಕ್ಯವಾದ "ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ"ದ ಭರವಸೆಯ ಹೊರತಾಗಿಯೂ ಹಿಂದುಳಿದ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಪನ್ಮೂಲಗಳು ಮತ್ತು ಅವಕಾಶಗಳ ಕೊರತೆ ಇದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.
ಡೆಸ್ಕ್ ಮತ್ತು ಕುರ್ಚಿಗಳಂತಹ ಮೂಲ ಸೌಕರ್ಯಗಳ ಕೊರತೆ, ಶಿಥಿಲಗೊಂಡ ತರಗತಿ ಕೊಠಡಿಗಳು, ಬೇಸಿಗೆಯಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲದೆ ಉಂಟಾಗುವ ವಿಪರೀತ ಸೆಖೆ ಹಾಗೂ ಕೆಲವು ಶಾಲೆಗಳಲ್ಲಿ ಇಲಿಗಳ ಕಾಟದ ಬಗ್ಗೆಯೂ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. ಸಿಬ್ಬಂದಿ ಕೊರತೆ ಮತ್ತು ಅತಿಯಾದ ಕೆಲಸದೊತ್ತಡವೂ ಪ್ರಮುಖ ದೂರುಗಳಾಗಿವೆ.
ಯುರೋಪ್ ನಲ್ಲೇ ಫ್ರಾನ್ಸ್ ನ ಪ್ರೌಢಶಾಲಾ ವಿದ್ಯಾರ್ಥಿಗಳ ಕಡ್ಡಾಯ ತರಗತಿ ಅವಧಿ ಅತ್ಯಧಿಕವಾಗಿದೆ. ಅಧಿಕಾರಿಗಳು ಈ ದೂರುಗಳನ್ನು ಪರಿಹರಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ಸುಝೇನ್ ನಿಜ್ಡಾಮ್ ಹೇಳಿದ್ದಾರೆ.
"ನಾವು ಈಗಲೇ ಕ್ರಮ ಕೈಗೊಳ್ಳಬೇಕಿದೆ. ಈ ಬೇಡಿಕೆಗಳನ್ನು ಅಂತಿಮ ಹಂತದವರೆಗೆ ಈಡೇರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದು ರಾಜಕೀಯ ಆದ್ಯತೆಯ ವಿಷಯ; ಯುವಜನತೆ ಮತ್ತು ನಮ್ಮ ದೇಶದ ಭವಿಷ್ಯಕ್ಕೆ ಆದ್ಯತೆ ನೀಡುವ ವಿಷಯ" ಎಂದು ಅವರು ಹೇಳಿದರು.
ಬೆಲ್ಜಿಯಂನಲ್ಲೂ ಪ್ರತಿಭಟನೆ
ನೆರೆಯ ಬೆಲ್ಜಿಯಂನಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆಗಳು ನಡೆದಿವೆ. ಮಂಗಳವಾರ ಪೂರ್ವ ನಗರವಾದ ಲೈಜ್ನಲ್ಲಿ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಬ್ರಸೆಲ್ಸ್ ಮತ್ತು ಇತರ ನಗರಗಳಲ್ಲೂ ಸಣ್ಣ ಪ್ರಮಾಣದ ಪ್ರತಿಭಟನೆಗಳು ನಡೆದಿವೆ.






