ಇಂಡೋನೇಶ್ಯಾದಲ್ಲಿ ಭುಗಿಲೆದ್ದ ಪ್ರತಿಭಟನೆ | ಮೂರು ಪ್ರಾಂತೀಯ ಸಂಸತ್ ಕಟ್ಟಡಕ್ಕೆ ಬೆಂಕಿ: ಮೂರು ಮಂದಿ ಮೃತ್ಯು

PC : NDTV
ಜಕಾರ್ತ, ಆ.30: ಇಂಡೊನೇಶ್ಯಾದಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮತ್ತು ಸಂಸದರಿಗೆ ವೇತನ ಹಾಗೂ ಭತ್ತೆಯಲ್ಲಿ ಭರ್ಜರಿ ಏರಿಕೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಪ್ರತಿಭಟನಾಕಾರರು ಶನಿವಾರ ಮೂರು ಪ್ರಾಂತೀಯ ಸಂಸತ್ ಗೆ ಬೆಂಕಿ ಹಚ್ಚಿದ್ದಾರೆ. ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದು ಇತರ ನಾಲ್ಕು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪಶ್ಚಿಮ ನುಸಾ ತೆಂಗಾರ , ಮಧ್ಯ ಜಾವಾ ಪ್ರಾಂತದಲ್ಲಿನ ಪೆಕಾಲೊಂಗಾನ್ ನಗರ ಹಾಗೂ ಪಶ್ಚಿಮ ಜಾವಾದ ಸಿರೆಬಾನ್ ನಗರದಲ್ಲಿನ ಪ್ರಾಂತೀಯ ಸಂಸತ್ ಕಟ್ಟಡಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಮೃತರಲ್ಲಿ ಇಬ್ಬರು ಸ್ಥಳೀಯ ಕೌನ್ಸಿಲ್ ನ ಸಿಬ್ಬಂದಿಗಳಾಗಿದ್ದರೆ ಮತ್ತೊಬ್ಬ ಸರಕಾರಿ ಸಿಬ್ಬಂದಿ. ಉರಿಯುತ್ತಿದ್ದ ಕಟ್ಟಡದಿಂದ ಹೊರಗೆ ಜಿಗಿದ ಇಬ್ಬರು ತೀವ್ರ ಗಾಯಗೊಂಡಿದ್ದು ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಸಂಸದರಿಗೆ ವೇತನ ಮತ್ತು ಭತ್ತೆ ಹೆಚ್ಚಿಸಿರುವುದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ನಿಯಂತ್ರಿಸುತ್ತಿದ್ದ ಪೊಲೀಸರ ವಾಹನವು ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಬಳಿಕ ದೇಶದಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು.
ರಾಜಧಾನಿ ಜಕಾರ್ತದಲ್ಲಿ ಹಲವು ಸಾರಿಗೆ ವ್ಯವಸ್ಥೆಗಳಿಗೆ ಹಾನಿಯಾಗಿದ್ದು ಶನಿವಾರ ಕೆಲವು ಪ್ರದೇಶಗಳಲ್ಲಿ ರೈಲು ಸಂಚಾರ ಮತ್ತು ಬಸ್ಸು ಸಂಚಾರ ಸ್ಥಗಿತಗೊಳಿಸಲಾಗಿದೆ. ಜಕಾರ್ತದಲ್ಲಿ ವಿಶೇಷ ಪೊಲೀಸ್ ಪಡೆ `ಬ್ರಿಮೋಬ್'ನ ಕೇಂದ್ರ ಕಚೇರಿಯ ಎದುರು ಗುಂಪು ಸೇರಿದ ಪ್ರತಿಭಟನಾಕಾರರು ಬೈಕ್ ಸವಾರನ ಸಾವಿಗೆ ಕಾರಣವಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಘೋಷಣೆ ಕೂಗಿ ಕಚೇರಿಯತ್ತ ಪಟಾಕಿಗಳನ್ನು ಎಸೆದರು. ಕಚೇರಿಯ ಗೇಟುಗಳನ್ನು ಮುರಿದು ಕಚೇರಿಯ ಫಲಕವನ್ನು ಕಿತ್ತೆಸೆದಾಗ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಎಂದು ವರದಿಯಾಗಿದೆ.
ಬೈಕ್ ಸವಾರನ ಸಾವಿನ ಘಟನೆಗೆ ಸಂಬಂಧಿಸಿದಂತೆ 7 ಅಧಿಕಾರಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.







