'ಹೃದಯಕ್ಕೆ ಒಂದು ಗುದ್ದು' ವಿಧಾನ ಬಳಸಿ ರಶ್ಯ ವಿಪಕ್ಷ ನಾಯಕ ನವಾಲ್ನಿ ಹತ್ಯೆ ಸಾಧ್ಯತೆ: ಮಾನವ ಹಕ್ಕು ಗುಂಪಿನ ಹೇಳಿಕೆ

ಅಲೆಕ್ಸಿ ನವಾಲ್ನಿ | Photo: livemint.com
ಮಾಸ್ಕೋ: ರಶ್ಯದ ಕೆಜಿಬಿಯ ಕುಖ್ಯಾತ `ಹೃದಯಕ್ಕೆ ಒಂದು ಗುದ್ದು' ವಿಧಾನ ಬಳಸಿ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯನ್ನು ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಗುಂಪು `ಗುಲಾಗು.ನೆಟ್'ನ ಸ್ಥಾಪಕ ವ್ಲಾದಿಮಿರ್ ಒಸೆಚ್ಕಿನ್ ಹೇಳಿದ್ದಾರೆ.
ಜೈಲಿನಲ್ಲಿ ಮೃತಪಟ್ಟಿದ್ದ ನವಾಲ್ನಿಯ ತಲೆ ಮತ್ತು ಎದೆಯ ಭಾಗದಲ್ಲಿ ಜಜ್ಜುಗುರುತು ಕಂಡುಬಂದಿದೆ. ಇದು ಕೆಜಿಬಿ(1991ರವರೆಗೆ ರಶ್ಯದ ರಾಷ್ಟ್ರೀಯ ಭದ್ರತಾ ಸಮಿತಿಗೆ ಈ ಹೆಸರಿತ್ತು)ಯ ವಿಶೇಷ ಪಡೆ ವಿಭಾಗದ ಕುಖ್ಯಾತ `ಒಂದು ಗುದ್ದು' ದಂಡನಾ ವಿಧಾನವಾಗಿದೆ ಎಂದು ಒಸೆಚ್ಕಿನ್ರನ್ನು ಉಲ್ಲೇಖಿಸಿ `ದಿ ಟೈಮ್ಸ್ ಆಫ್ ಲಂಡನ್' ವರದಿ ಮಾಡಿದೆ.
`ದೇಹದ ಮಧ್ಯಭಾಗಕ್ಕೆ, ಹೃದಯದ ಮೇಲೆ ಗುದ್ದುವ ಮೂಲಕ ಒಂದೇ ಏಟಿಗೆ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಅವರು ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಿದರು. ಅದು ಕೆಜಿಬಿಯ ಹೆಗ್ಗುರುತಾಗಿದೆ. ಹೃದಯಕ್ಕೆ ಗುದ್ದುವ ಮೊದಲು 47 ವರ್ಷದ ನವಾಲ್ನಿಯನ್ನು ಶೂನ್ಯಕ್ಕಿಂತ ಕೆಳಮಟ್ಟದ ತಾಪಮಾನದಲ್ಲಿ 2 ಗಂಟೆ ಇರಿಸಲಾಗಿತ್ತು. ಇದು ಅವರ ದೇಹವನ್ನು ಮತ್ತಷ್ಟು ದುರ್ಬಲಗೊಳಿಸಿದೆ. ರಕ್ತಸಂಚಾರ ಕಡಿಮೆಗೊಂಡ ವ್ಯಕ್ತಿಯನ್ನು ತರಬೇತಿ ಪಡೆದವರು ಕ್ಷಣಮಾತ್ರದಲ್ಲಿ ಕೊಲ್ಲಲು ಸಾಧ್ಯ. ಈ ವಿಧಾನದ ಮೂಲಕ ಕೆಲವು ಕೈದಿಗಳನ್ನು ಹತ್ಯೆ ಮಾಡಿರುವ ಬಗ್ಗೆ ಜೈಲು ಶಿಕ್ಷೆ ಮುಗಿಸಿರುವವರು ಮಾಹಿತಿ ನೀಡಿದ್ದಾರೆ' ಎಂದವರು ಪ್ರತಿಪಾದಿಸಿದ್ದಾರೆ.
ಈ ಮಧ್ಯೆ, ನವಾಲ್ನಿ ಹತ್ಯೆಗೆ ಕಾರಣವನ್ನು ರಶ್ಯದ ಅಧಿಕಾರಿಗಳು ಇದುವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ನವಾಲ್ನಿಯ ಮೃತದೇಹವನ್ನು ಕುಟುಂಬದವರಿಗೆ ಇದುವರೆಗೂ ಹಸ್ತಾಂತರಿಸಿಲ್ಲ. ಎರಡು ವಾರಗಳ ರಾಸಾಯನಿಕ ಪರೀಕ್ಷೆಯ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ನವಾಲ್ನಿಯ ಆಪ್ತರು ಹೇಳಿದ್ದಾರೆ. ಈ ಮಧ್ಯೆ, ನವಾಲ್ನಿಗೆ ವಿಷಪ್ರಾಶನ ಮಾಡಿ ಸಾಯಿಸಲಾಗಿದೆ. ಈ ಹತ್ಯೆಯನ್ನು ಮುಚ್ಚಿಡಲು ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಲು ವಿಳಂಬಿಸುತ್ತಿದ್ದಾರೆ ಎಂದು ಅವರ ಪತ್ನಿ ಯೂಲಿಯಾ ಆರೋಪಿಸಿದ್ದಾರೆ.







