33 ವರ್ಷ ಅಮೆರಿಕಾದಲ್ಲಿ ನೆಲೆಸಿದ್ದ ಪಂಜಾಬಿ ಅಜ್ಜಿಯ ಬಂಧನ!

x.com/IndianExpress
ಕಾಲಿಫೋರ್ನಿಯಾ: ಕಳೆದ ಮೂವತ್ತಮೂರು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ 73 ವರ್ಷದ ವೃದ್ಧೆಯನ್ನು ಅಮೆರಿಕದ ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಜಾರಿ ವಿಭಾಗದ ಅಧಿಕಾರಿಗಳು ಬಂಧಿಸಿರುವುದು ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಯಾಲಿಫೋರ್ನಿಯಾದ ಹರ್ಕ್ಯುಲೆಸ್ ನಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದ ಹರ್ಜೀತ್ ಕೌರ್ ಕಳೆದ 13 ವರ್ಷಗಳಿಂದ ಪ್ರತಿ ಆರು ತಿಂಗಳಿಗೊಮ್ಮೆ ಇಮಿಗ್ರೇಶನ್ ತಪಾಸಣೆಗೆ ಒಳಗಾಗುತ್ತಿದ್ದರು. ಆಕೆಯ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ಇಲ್ಲ. ಕಳೆದ ಮೂವತ್ತಮೂರು ವರ್ಷಗಳಿಂದ ಈ ಕೆಲಸ ಮಾಡುತ್ತಾ ಬಂದಿರುವ ಅವರು 1990ರ ದಶಕದಲ್ಲಿ ಬಂದಾಗಿನಿಂದ ತೆರಿಗೆಯನ್ನು ಕೂಡಾ ಪಾವತಿಸುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಆದರೆ ಸ್ಯಾನ್ ಫ್ರಾನ್ಸಿಸ್ಕೊ ಐಸಿಇ ಕಚೇರಿಯಲ್ಲಿ ಆಕೆಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಫೋಕ್ಸ್ ನ್ಯೂಸ್ ವರದಿ ಮಾಡಿದೆ.
ವೃದ್ಧೆಯ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಪುತ್ರಿ ಮಂಜೀತ್ ಕೌರ್ ಕಳವಳ ವ್ಯಕ್ತಪಡಿಸಿದ್ದಾರೆ. "ನಿನ್ನೆ ಅವರ ಧ್ವನಿಯಲ್ಲಿ ಆತಂಕ ಕೇಳಿಬಂತು. ಶಕ್ತಿಗುಂದಿ ದುಃಖ ಉಮ್ಮಳಿಸಿ ಬರುತ್ತಿರುವುದು ಗಮನಕ್ಕೆ ಬಂತು. ಅವರ ಆರೋಗ್ಯದ ಬಗ್ಗೆ ತೀರಾ ಆತಂಕವಾಗಿದೆ. ಔಷಧೋಪಚಾರ ಸಿಗುತ್ತಿಲ್ಲ. ಭಾವನಾತ್ಮಕವಾಗಿ ಗೊಂದಲದಲ್ಲಿದ್ದಾರೆ" ಎಂದು ಹೇಳಿದ್ದಾರೆ.
ಕೌರ್ ಅವರನ್ನು ಸ್ಯಾನ್ ಫ್ರಾನ್ಸಿಸ್ಕೊದಿಂದ ಬೇಕರ್ಸ್ಫೀಲ್ಡ್ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ಆಗಸ್ಟ್ ನಲ್ಲಿ ಮೊದಲ ಬಾರಿಗೆ ವೃದ್ಧೆಯ ಜತೆ ಕುಟುಂಬ ಸದಸ್ಯರು ಕೂಡಾ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
ನಿಮ್ಮ ಅಜ್ಜಿಯನ್ನು ಬಂಧಿಸುತ್ತಿರುವುದಾಗಿ ಮಾತ್ರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ ಬಳಿಕ ನಾವು ಅವರನ್ನು ನೋಡಿಲ್ಲ. ಹೆಚ್ಚು ಕಾಲ ನಮ್ಮೊಂದಿಗೆ ಮಾತನಾಡಲೂ ಅವಕಾಶ ನೀಡಿಲ್ಲ. ಬಳಿಕ ಅವರ ಧ್ವನಿ ಕೇಳಿದಾಗ ಅಳುತ್ತಾ, ನೆರವಿಗಾಗಿ ಮೊರೆಯಿಟ್ಟರು ಎಂದು ಮೊಮ್ಮಗಳು ಸುಖ್ಮೀತ್ ಸಂಧು ಬಣ್ಣಿಸಿದ್ದಾರೆ.







