ಪುಟಿನ್ರನ್ನು ನಂಬಲು ಸಾಧ್ಯವಿಲ್ಲ: ಝೆಲೆನ್ಸ್ಕಿ
►ಟ್ರಂಪ್ ಪ್ರಸ್ತಾಪ ತಿರಸ್ಕರಿಸಿದ ಉಕ್ರೇನ್

ಝೆಲೆನ್ಸ್ಕಿ | Photo: NDTV
ಕೀವ್,+ : ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶುಕ್ರವಾರ ಹೇಳಿದ್ದು ಜರ್ಮನಿಯು ಮ್ಯೂನಿಚ್ನಲ್ಲಿ ಅಮೆರಿಕ-ರಶ್ಯ ನಡುವೆ ನಡೆಯಲಿರುವ ಮಾತುಕತೆಯಲ್ಲಿ ಉಕ್ರೇನ್ ಕೂಡಾ ಪಾಲ್ಗೊಳ್ಳಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ರಶ್ಯದ ಜತೆಗಿನ ಮಾತುಕತೆಗೆ ಮಿತ್ರಪಕ್ಷದವರಲ್ಲಿ ಸಮಾನ ನಿಲುವಿನ ಅಗತ್ಯವಿದೆ. ಆದರೆ ಪ್ರಸ್ತುತ ಅಂತಹ ಪರಿಸ್ಥಿತಿಯಿಲ್ಲ. ಆದ್ದರಿಂದ ರಶ್ಯದ ಜತೆ ಚರ್ಚೆಯನ್ನು ಕಲ್ಪಿಸಲು ಸಾಧ್ಯವಿಲ್ಲ. ಉಕ್ರೇನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ. ಉಕ್ರೇನ್ ಮೊದಲು ಅಮೆರಿಕದ ಜತೆ ಮಾತನಾಡಬೇಕು. ವಾಸ್ತವಿಕ ಮತ್ತು ಸುಸ್ಥಿರ ಶಾಂತಿ ಸ್ಥಾಪನೆಗಾಗಿನ ಯಾವುದೇ ಗಂಭೀರ ಮಾತುಕತೆಯಲ್ಲಿ ಯುರೋಪ್ ಕೂಡಾ ಪಾಲ್ಗೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಡಿಮಿಟ್ರೊ ಲಿಟ್ವಿನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉಕ್ರೇನ್ ಶಾಂತಿ ಮಾತುಕತೆಯನ್ನು ಶೀಘ್ರ ಪ್ರಾರಂಭಿಸಲು ಮತ್ತು ಸ್ನೇಹಪರ ಭೇಟಿಗಳನ್ನು ವಿನಿಮಯ ಮಾಡಿಕೊಳ್ಳಲು ತಾನು ಮತ್ತು ಪುಟಿನ್ ಒಪ್ಪಿಕೊಂಡಿದ್ದೇವೆ ಎಂದು ಇತ್ತೀಚೆಗೆ ಟ್ರಂಪ್ ನೀಡಿದ್ದ ಹೇಳಿಕೆ ಉಕ್ರೇನ್ ಹಾಗೂ ನೇಟೊ ರಾಷ್ಟ್ರಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಗುರುವಾರ ಅಮೆರಿಕದ ಉನ್ನತ ಅಧಿಕಾರಿಗಳು ಯುರೋಪ್ನಲ್ಲಿ ಸರಣಿ ಸಭೆ ನಡೆಸುತ್ತಿದ್ದಂತೆಯೇ ` ಯುದ್ಧವನ್ನು ಅಂತ್ಯಗೊಳಿಸಲು ಸಿದ್ಧ ' ಎಂಬ ಪುಟಿನ್ ಹೇಳಿಕೆಯನ್ನು ನಂಬಬೇಡಿ ಎಂದು ಝೆಲೆನ್ಸ್ಕಿ ಜಾಗತಿಕ ಮುಖಂಡರನ್ನು ಆಗ್ರಹಿಸಿದ್ದಾರೆ.







