ಶಾಂಘೈ ಶೃಂಗಸಭೆಯಲ್ಲಿ ಉಕ್ರೇನ್ ಆಕ್ರಮಣ ಸಮರ್ಥಿಸಿಕೊಂಡ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಟಿಯಾಂಜಿನ್, ಸೆ.1: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಸಮರ್ಥಿಸಿಕೊಂಡಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆ ದೇಶದ ವಿರುದ್ಧ ಕಳೆದ ಮೂರೂವರೆ ವರ್ಷದಿಂದ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ಪಾಶ್ಚಿಮಾತ್ಯ ದೇಶಗಳೇ ಕಾರಣವಾಗಿವೆ ಎಂದು ಸೋಮವಾರ ಪ್ರತಿಪಾದಿಸಿದ್ದಾರೆ.
ಚೀನಾದ ಟಿಯಾಂಜಿನ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್ ` ಉಕ್ರೇನ್ ಮೇಲಿನ ರಶ್ಯದ ದಾಳಿಯಿಂದ ಈ ಬಿಕ್ಕಟ್ಟು ಪ್ರಚೋದಿಸಲ್ಪಟ್ಟಿಲ್ಲ. ಆದರೆ ಪಾಶ್ಚಿಮಾತ್ಯರ ಬೆಂಬಲ ಮತ್ತು ಪ್ರಚೋದನೆಯಿಂದ ಉಕ್ರೇನ್ನಲ್ಲಿ ನಡೆದ ದಂಗೆಯ ಪರಿಣಾಮವಾಗಿದೆ' ಎಂದರು.
2013-2014ರಲ್ಲಿ ಉಕ್ರೇನ್ ನಲ್ಲಿ ನಡೆದ ಯುರೋಪಿಯನ್ ಪರ ಕ್ರಾಂತಿಯಲ್ಲಿ ರಶ್ಯ ಪರ ಅಧ್ಯಕ್ಷರನ್ನು ಪದಚ್ಯುತಗೊಳಿಸಲಾಗಿದ್ದು ಇದಕ್ಕೆ ಪಾಶ್ಚಿಮಾತ್ಯ ದೇಶಗಳ ಪ್ರಚೋದನೆ ಮತ್ತು ಬೆಂಬಲವಿತ್ತು. ಉಕ್ರೇನನ್ನು ನೇಟೋಗೆ ತರಲು ಪಾಶ್ಚಿಮಾತ್ಯರು ಪ್ರಯತ್ನಿಸುತ್ತಿದ್ದಾರೆ. ಈ ಕ್ರಮಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಈಗ ನಡೆಯುತ್ತಿರುವ ಯುದ್ಧಕ್ಕೆ ಕಾರಣವಾಗಿದೆ ಮತ್ತು ಸಾವಿರಾರು ಸಾವು-ನೋವು, ಅಪಾರ ನಾಶ-ನಷ್ಟಕ್ಕೆ ಕಾರಣವಾಗಿದೆ ಎಂದು ಪುಟಿನ್ ಹೇಳಿದ್ದಾರೆ.





