ರಶ್ಯ ಜತೆ ವ್ಯವಹರಿಸುವ ದೇಶಗಳ ಮೇಲೆ ಸುಂಕ ಅಮೆರಿಕಕ್ಕೆ ತಿರುಗುಬಾಣವಾಗಲಿದೆ : ಪುಟಿನ್

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ: ರಶ್ಯದಿಂದ ಇಂಧನ ಆಮದು ಕಡಿತಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ಮೇಲೆ ಒತ್ತಡ ಹೇರುತ್ತಿರುವ ಅಮೆರಿಕದ ಕ್ರಮವನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೀವ್ರವಾಗಿ ಖಂಡಿಸಿದ್ದಾರೆ. ಇಂಥ ಪ್ರಯತ್ನ ಆರ್ಥಿಕವಾಗಿ ಅಮೆರಿಕಕ್ಕೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ರಶ್ಯದ ವ್ಯಾಪಾರ ಪಾಲುದಾರರ ಮೇಲೆ ಹೆಚ್ಚಿನ ಸುಂಕ ವಿಧಿಸಿದರೆ, ಇದು ಜಾಗತಿಕವಾಗಿ ಬೆಲೆ ಏರಿಕೆಗೆ ಕಾರಣವಾಗಲಿದೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಭಾರತದ ಮೇಲೆ ಶೇ.25 ಹಾಗೂ ಚೀನಾದ ಮೇಲೆ ಶೇ.50ರಷ್ಟು ಹೆಚ್ಚುವರಿ ಸುಂಕವನ್ನು ಅಮೆರಿಕ ವಿಧಿಸಿದೆ. ರಶ್ಯದ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಸ್ವತಃ ಅವಮಾನಕ್ಕೆ ಈಡಾಗಲು ಭಾರತ ಹಾಗೂ ಚೀನಾ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
"ನಮ್ಮ ಇಂಧನವನ್ನು ಭಾರತ ತಿರಸ್ಕರಿಸಿದರೆ ಅದಕ್ಕೆ ನಷ್ಟವಾಗುತ್ತದೆ. ಆದರೆ ನನ್ನ ಮೇಲೆ ನಂಬಿಕೆ ಹೊಂದಿರುವ ಭಾರತದಂಥ ದೇಶದ ಜನ, ರಾಜಕೀಯ ಮುಖಂಡರ ನಿರ್ಧಾರಗಳ ಮೇಲೆ ನಿಗಾ ಇಡುತ್ತಾರೆ ಹಾಗೂ ಯಾರ ಎದುರೂ ಅವಮಾನವಾಗಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.
ಇಂಥ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಪುಟಿನ್ ನುಡಿದರು.







