ಖತರ್ | ಇಸ್ರೇಲ್ ವಾಯುದಾಳಿಯಲ್ಲಿ ಹಮಾಸ್ ನ ಖಲೀಲ್ ಅಲ್-ಹಯ್ಯ ಪಾರು; ಅವರ ಮಗ, ಸಹಾಯಕನ ಹತ್ಯೆ: ವರದಿ

ಖಲೀಲ್ ಅಲ್-ಹಯ್ಯ | PC : X
ದೋಹಾ (ಖತರ್): ಖತರ್ ನ ರಾಜಧಾನಿ ದೋಹಾದಲ್ಲಿ ಹಮಾಸ್ನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಭಾರೀ ವಾಯುದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಮಾಸ್ ನಾಯಕತ್ವವನ್ನು ಸಂಪೂರ್ಣ ನಿರ್ಮೂಲಗೊಳಿಸುವ ಉದ್ದೇಶದಿಂದ ನಡೆದ ದಾಳಿಯ ವೇಳೆ ನಗರದೆಲ್ಲೆಡೆ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಸ್ಥಳೀಯ ಜನರಲ್ಲಿ ಭೀತಿ ವಾತಾವರಣ ಉಂಟಾಗಿದೆ.
ಹಮಾಸ್ನ ಹಿರಿಯ ನಾಯಕ ಸುಹೈಲ್ ಅಲ್-ಹಿಂದಿ Aljazeera ಗೆ ನೀಡಿದ ಸಂದರ್ಶನದಲ್ಲಿ, “ಹಮಾಸ್ ನಾಯಕತ್ವವು ದಾಳಿಯಿಂದ ಪಾರಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಟ್ರಂಪ್ ಅವರ ಕದನ ವಿರಾಮ ಪ್ರಸ್ತಾಪ ಕುರಿತು ಸಭೆ ಸೇರುತ್ತಿದ್ದ ಖಲೀಲ್ ಅಲ್-ಹಯ್ಯ ಮತ್ತು ಇತರ ಹಮಾಸ್ ನಾಯಕರನ್ನು ಕೊಲ್ಲುವ ಇಸ್ರೇಲ್ ನ ಪ್ರಯತ್ನ ವಿಫಲವಾಗಿದೆ. ಹಮಾಸ್ ನಾಯಕತ್ವದ ರಕ್ತವೂ ಫೆಲೆಸ್ತೀನ್ ನ ಪ್ರತಿಯೊಂದು ಮಗುವಿನ ರಕ್ತದಷ್ಟೇ ಅಮೂಲ್ಯ”, ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ದಾಳಿಯಲ್ಲಿ ಅಲ್-ಹಯ್ಯ ಅವರ ಮಗ ಹುಮಾಮ್ ಹಾಗೂ ಅವರ ಉನ್ನತ ಸಹಾಯಕರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿಯ ನಂತರ ಇನ್ನೂ ಮೂವರು ಅಂಗರಕ್ಷಕರೊಂದಿಗೆ ಸಂಪರ್ಕ ಕಡಿತಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಅಮೆರಿಕ ಪ್ರಸ್ತಾಪಿಸಿದ ಗಾಝಾ ಕದನ ವಿರಾಮ ಯೋಜನೆ ಕುರಿತು ಹಮಾಸ್ ನಾಯಕರು ಚರ್ಚಿಸುತ್ತಿದ್ದ ಸಮಯದಲ್ಲೇ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ದಾಳಿಯನ್ನು ಖತರ್ ಸರ್ಕಾರ ತೀವ್ರವಾಗಿ ಖಂಡಿಸಿದ್ದು, “ಇದು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ” ಎಂದು ಅಧಿಕೃತ ಪ್ರಕಟಣೆಯಲ್ಲಿ ಖಂಡಿಸಿದೆ.
ಗಾಝಾ ಪಟ್ಟಿಯಲ್ಲಿ ಇತ್ತೀಚಿನ ಇಸ್ರೇಲಿ ದಾಳಿಗಳ ಪರಿಣಾಮವಾಗಿ 39 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಅಕ್ಟೋಬರ್ 2023ರಿಂದ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಇದುವರೆಗೆ ಕನಿಷ್ಠ 64,605 ಮಂದಿ ಪ್ರಾಣ ಕಳೆದುಕೊಂಡಿದ್ದು, 1,63,319 ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ಇನ್ನೂ ಅವಶೇಷಗಳ ಅಡಿಯಲ್ಲಿರುವ ಭೀತಿ ವ್ಯಕ್ತವಾಗಿದೆ.
ಅಕ್ಟೋಬರ್ 7ರ ದಾಳಿಯಲ್ಲಿ ಇಸ್ರೇಲ್ ನಲ್ಲಿ 1,139 ಮಂದಿ ಸಾವನ್ನಪ್ಪಿದ್ದರೆ, ಸುಮಾರು 200 ಮಂದಿಯನ್ನು ಹಮಾಸ್ ಅಪಹರಿಸಿತ್ತು ಎಂದು ವರದಿಯಾಗಿದೆ.







