ಖತರ್ ಗೆ ಅಮೆರಿಕದ ಪ್ರತಿನಿಧಿಗಳ ಆಗಮನ: ಒಪ್ಪಂದ ಅನುಷ್ಠಾನಕ್ಕೆ ಉಭಯ ದೇಶಗಳ ಪ್ರಯತ್ನ

ದೋಹಾ, ಜೂ.30: ಅಮೆರಿಕ-ಇರಾನ್ ಯುದ್ಧವನ್ನು ಕೊನೆಗೊಳಿಸುವ ಉದ್ದೇಶ ಹೊಂದಿರುವ ಆರಂಭಿಕ ಒಪ್ಪಂದವನ್ನು ಅನುಷ್ಠಾನಗೊಳಿಸುವ ಕುರಿತು ಮಧ್ಯಸ್ಥಗಾರರೊಂದಿಗೆ ಪರೋಕ್ಷ ಮಾತುಕತೆ ನಡೆಸಲು ಅಮೆರಿಕದ ಇಬ್ಬರು ಹಿರಿಯ ಪ್ರತಿನಿಧಿಗಳು ಮಂಗಳವಾರ ಖತರ್ ಗೆ ಆಗಮಿಸಿದ್ದಾರೆ.
ಆದರೆ, ಅಮೆರಿಕ ಮತ್ತು ಇರಾನ್ ಸದ್ಯಕ್ಕೆ ನೇರ ಮಾತುಕತೆಯ ಸಾಧ್ಯತೆಯನ್ನು ತಳ್ಳಿಹಾಕಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಹಿರಿಯ ಸಲಹೆಗಾರ ಜೆರೆಡ್ ಕುಶ್ನರ್ ಅವರು ಖತರ್ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಲು ದೋಹಾ ತಲುಪಿದ್ದಾರೆ. ಉಭಯ ದೇಶಗಳ ನಡುವೆ ಖತರ್ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಮಧ್ಯೆ, ಅಮೆರಿಕ ಅಧಿಕಾರಿಗಳೊಂದಿಗೆ ಯಾವುದೇ ಮಾತುಕತೆ ನಿಗದಿಯಾಗಿಲ್ಲ ಎಂದು ಇರಾನ್ ಹೇಳಿದ್ದು, ತನ್ನ ನಿಯೋಗದ ಖತರ್ ಭೇಟಿಗೂ ಅಮೆರಿಕ ಪ್ರತಿನಿಧಿಗಳ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ, ಇರಾನ್ ನಿಯೋಗದ ಖತರ್ ಭೇಟಿಯು ಕೇವಲ ತಿಳುವಳಿಕಾ ಒಪ್ಪಂದದ ಅನುಷ್ಠಾನವನ್ನು, ಅದರಲ್ಲೂ ಮುಖ್ಯವಾಗಿ ಆರ್ಟಿಕಲ್ 11 ಅನ್ನು ಮೇಲ್ವಿಚಾರಣೆ ಮಾಡುವ ಉದ್ದೇಶವನ್ನು ಹೊಂದಿದೆ. ಸಮಗ್ರ ಅಥವಾ ಅಂತಿಮ ಒಪ್ಪಂದದ ಕುರಿತು ಚರ್ಚೆಗಳು ಇನ್ನೂ ಪ್ರಾರಂಭವಾಗಿಲ್ಲ. 14 ಅಂಶಗಳ ಈ ತಿಳುವಳಿಕಾ ಒಪ್ಪಂದದ ಆರ್ಟಿಕಲ್ 13ರ ಪ್ರಕಾರ, ಆರ್ಟಿಕಲ್ 1, 4, 5, 10 ಮತ್ತು 11ರ ಅನುಷ್ಠಾನ ಪ್ರಕ್ರಿಯೆಗಳು ಪ್ರಾರಂಭವಾಗಿ, ಚಾಲ್ತಿಯಲ್ಲಿದ್ದಾಗ ಮಾತ್ರ ಔಪಚಾರಿಕ ಮಾತುಕತೆಗಳು ಆರಂಭವಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಆರ್ಟಿಕಲ್ 11ರ ಪ್ರಕಾರ, ಇರಾನ್ ತನ್ನ ಮುಟ್ಟುಗೋಲು ಹಾಕಿಕೊಳ್ಳಲಾದ ಅಥವಾ ನಿರ್ಬಂಧಿತ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅಮೆರಿಕವು ಪರಸ್ಪರ ಒಪ್ಪಿಗೆಯ ಕಾರ್ಯವಿಧಾನಗಳ ಮೂಲಕ ನೆರವಾಗಬೇಕಿದೆ. ಹಾಗೆಯೇ, ಆ ಹಣದ ಬಳಕೆಯನ್ನು ಸುಲಭಗೊಳಿಸಲು ಅಗತ್ಯವಾದ ಪರವಾನಗಿಗಳು ಮತ್ತು ಅಧಿಕಾರಗಳನ್ನು ನೀಡಬೇಕಾಗುತ್ತದೆ.






