Qatar | CNG ಸಂಕೀರ್ಣದಲ್ಲಿ ಭೀಕರ ಸ್ಫೋಟ; ಭಾರತೀಯರು ಸೇರಿ ಕನಿಷ್ಠ 13 ಮೃತ್ಯು

Photo Credit : NDTV
ದೋಹಾ, ಜೂ. 22: ಖತರ್ ನ ಬೃಹತ್ ‘ರಾಸ್ ಲಫ್ಫಾನ್’ ದ್ರವೀಕೃತ ನೈಸರ್ಗಿಕ ಅನಿಲ (ಸಿಎನ್ಜಿ) ಸಂಕೀರ್ಣದಲ್ಲಿ ರವಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಭಾರತೀಯರು ಸೇರಿದಂತೆ ಕನಿಷ್ಠ 13 ಜನರು ಮೃತಪಟ್ಟಿದ್ದು, 66 ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ಇಂಧನ ಸಚಿವರು ಸೋಮವಾರ ತಿಳಿಸಿದ್ದಾರೆ.
‘‘ನನಗೆ ಎಂದಿಗೂ ಮಾಡಬೇಕಾಗದಿರಲಿ ಎಂದು ಆಶಿಸಿದ್ದ ಒಂದು ವಿಷಯವನ್ನು ಇಂದು ಮಾಡಬೇಕಾಗಿ ಬಂದಿದೆ. ಅಂದರೆ, ನಮ್ಮ 13 ಜನರ ದುರಂತ ಮರಣವನ್ನು ನಾನು ಇಂದು ಪ್ರಕಟಿಸಬೇಕಾಗಿದೆ. ಅವರು ಭಾರತ ಮತ್ತು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ’’ ಎಂದು ಖತರ್ ನ ಇಂಧನ ಸಚಿವ ಸಾದ್ ಅಲ್-ಕಾಬಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾರ್ಚ್ನಲ್ಲಿ ಇರಾನ್ ನಡೆಸಿದ ದಾಳಿಯ ಬಳಿಕ ಈ ಸ್ಥಾವರದಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ರವಿವಾರ ಕಾರ್ಮಿಕರು ಕೆಲಸವನ್ನು ಪುನರಾರಂಭಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 66 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಆದರೆ, ಈ ಘಟನೆಯಲ್ಲಿ ಎಷ್ಟು ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎಂಬ ಕುರಿತು ಸಚಿವರು ಯಾವುದೇ ನಿಖರ ಮಾಹಿತಿ ನೀಡಿಲ್ಲ.
‘‘ಅರವತ್ತಾರು ಜನರಿಗೆ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ’’ ಎಂದು ಅಲ್-ಕಾಬಿ ತಿಳಿಸಿದ್ದಾರೆ.
‘ಬರ್ಜಾನ್’ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ‘ತಾಂತ್ರಿಕ ಅಪಘಾತ’ವೊಂದು ಸಂಭವಿಸಿದೆ ಎಂದು ರವಿವಾರ ಸಂಜೆ ಅಧಿಕಾರಿಗಳು ಹೇಳಿದ್ದರು.
ಈ ಅಪಘಾತದಿಂದ ಘಟಕದ ರಫ್ತು ಸಾಮರ್ಥ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ ಹಾಗೂ ಪರಿಸರಕ್ಕೂ ಯಾವುದೇ ಅಪಾಯವಿಲ್ಲ ಎಂದು ಖತರ್ ಇಂಧನ ಸಚಿವಾಲಯ ತಿಳಿಸಿದೆ.
ಬರ್ಜಾನ್ ಘಟಕವು ಪ್ರತಿದಿನ ಸುಮಾರು 140 ಕೋಟಿ ಘನ ಅಡಿಗಳಷ್ಟು ಅನಿಲ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಖತರ್ ಅದನ್ನು ಮುಖ್ಯವಾಗಿ ಸ್ಥಳೀಯ ವಿದ್ಯುತ್ ಉತ್ಪಾದನೆ ಹಾಗೂ ಮರುಭೂಮಿ ಪ್ರದೇಶಗಳಲ್ಲಿರುವ ತನ್ನ ಮಹತ್ವದ ಉಪ್ಪು ನೀರು ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಬಳಸುತ್ತಿದೆ.
ಮಾರ್ಚ್ನಲ್ಲಿ ಇರಾನ್ನ ಕ್ಷಿಪಣಿಯೊಂದು ಈ ಘಟಕಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮವಾಗಿ ವ್ಯಾಪಕ ಹಾನಿ ಉಂಟಾಗಿತ್ತು.






