ಖತರ್ ಕಡೆಗೆ ಇರಾನ್ ನಿಂದ 12 ಕ್ಷಿಪಣಿ ದಾಳಿ: ರಕ್ಷಣಾ ಸಚಿವಾಲಯ

ಸಾಂದರ್ಭಿಕ ಚಿತ್ರ | PC : voanews
ದೋಹಾ, ಮಾ. 8: ಇರಾನ್ ನಿಂದ ಹಾರಿಸಲಾದ ಒಟ್ಟು 12 ಕ್ಷಿಪಣಿಗಳು ಖತರ್ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದವು ಎಂದು ಖತರ್ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಸಚಿವಾಲಯ ಪ್ರಕಟಿಸಿದ ಹೇಳಿಕೆಯಲ್ಲಿ, 10 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡು ಕ್ರೂಸ್ ಕ್ಷಿಪಣಿಗಳನ್ನು ಖತರ್ ಕಡೆಗೆ ಹಾರಿಸಲಾಗಿದೆ ಎಂದು ವಿವರಿಸಿದೆ.
ಖತರ್ ಸಶಸ್ತ್ರ ಪಡೆಗಳ ಪ್ರಕಾರ, ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡೂ ಕ್ರೂಸ್ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಮಧ್ಯದಲ್ಲೇ ತಡೆಹಿಡಿಯಲಾಗಿದೆ. ಉಳಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಖತರ್ ನ ಪ್ರಾದೇಶಿಕ ಸಮುದ್ರ ನೀರಿನಲ್ಲಿ ಬಿದ್ದಿವೆ. ಇನ್ನೆರಡು ಕ್ಷಿಪಣಿಗಳು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಈ ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.
ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಹಾಗೂ ಯಾವುದೇ ಬಾಹ್ಯ ಬೆದರಿಕೆಗೆ ತಕ್ಷಣ ಪ್ರತಿಕ್ರಿಯಿಸಲು ಖತರ್ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಮರ್ಥವಾಗಿದ್ದು ಸಿದ್ಧವಾಗಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.





