ಮಧ್ಯಸ್ಥಿಕೆ ಪ್ರಯತ್ನಕ್ಕಾಗಿ ಖತರ್ ಪ್ರಧಾನಿ ಇರಾನ್ಗೆ ಭೇಟಿ : ರಾಜತಾಂತ್ರಿಕ ಪ್ರಕ್ರಿಯೆ ಸಕ್ರಿಯಗೊಳಿಸುವ ಬಗ್ಗೆ ಚರ್ಚೆ

Photo Credit : aljazeera.com
ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಸಂಭಾಷಣೆಗೆ ಸೂಕ್ತ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಖತರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಾಸಿಮ್ ಅಲ್ ಥಾನಿ ಗುರುವಾರ ಟೆಹರಾನ್ಗೆ ಆಗಮಿಸಿದ್ದಾರೆ.
ಇರಾನ್ನ ಗಲ್ಫ್ ನೆರೆಹೊರೆಯ ದೇಶ ಹಾಗೂ ಅಮೆರಿಕದ ಮಿತ್ರರಾಷ್ಟ್ರವಾಗಿರುವ ಖತರ್, ಕದನನಿರತ ಬಣಗಳ ನಡುವೆ ಹಿಂಬಾಗಿಲ ಮಾತುಕತೆ ನಡೆಸುವ ಮಧ್ಯಸ್ಥಿಕೆದಾರನಾಗಿ ಕಾರ್ಯನಿರ್ವಹಿಸಿದೆ ಮತ್ತು ಜೂನ್ನಲ್ಲಿ ಸಂಕ್ಷಿಪ್ತವಾಗಿ ಯುದ್ಧವನ್ನು ಸ್ಥಗಿತಗೊಳಿಸಿದ ಕದನ ವಿರಾಮ ಒಪ್ಪಂದದಲ್ಲಿ ನೇರ ಪಾತ್ರ ವಹಿಸಿತ್ತು.
ಖತರ್ ಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಅಬ್ದುಲ್ ರಹಮಾನ್ ಅಲ್ ಥಾನಿ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಭೇಟಿಯಾದರು ಎಂದು ಇರಾನ್ ವಿದೇಶಾಂಗ ಸಚಿವಾಲಯದ ತಿಳಿಸಿದೆ.
ಈ ಇಬ್ಬರು ನಾಯಕರು ಪ್ರಾದೇಶಿಕ ಬೆಳವಣಿಗೆಗಳು, ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನಗಳು ಮತ್ತು ಸಂಭಾಷಣೆಗೆ ಸೂಕ್ತ ವಾತಾವರಣವನ್ನು ನಿರ್ಮಿಸುವ ಕುರಿತು ಪರಿಶೀಲಿಸಿದರು. ಹಾರ್ಮುಝ್ ಜಲಸಂಧಿಯ ಮೂಲಕ ತಾತ್ಕಾಲಿಕ ಜಂಟಿ ಇರಾನಿ-ಒಮಾನಿ ಹಡಗು ಸಂಚಾರ ಮಾರ್ಗವನ್ನು ಸ್ಥಾಪಿಸುವುದು ಮತ್ತು ಜಲಮಾರ್ಗದಿಂದ ಸಮುದ್ರ ಬಾಂಬ್ ತೆರವುಗೊಳಿಸಲು ಜಂಟಿ ಯೋಜನೆಯನ್ನು ಕೈಗೊಳ್ಳುವುದನ್ನು ಒಳಗೊಂಡಂತೆ ಹಂತ-ಹಂತದ ಚೌಕಟ್ಟಿನ ಕುರಿತು ಖತರ್ ಮತ್ತು ಇರಾನ್ ಚರ್ಚಿಸಿವೆ.
ಈ ಭೇಟಿಯು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮತ್ತು ಪ್ರದೇಶದಲ್ಲಿ ಭದ್ರತೆ ಹಾಗೂ ಸ್ಥಿರತೆಯನ್ನು ಉತ್ತೇಜಿಸಲು ರಾಜತಾಂತ್ರಿಕ ಮಾರ್ಗವೇ ಅತ್ಯುತ್ತಮ ಮಾರ್ಗ ಎಂಬ ಖತರ್ನ ದೃಢವಾದ ನಿಲುವನ್ನು ಪ್ರತಿಬಿಂಬಿಸುತ್ತದೆ. ಈ ಮಾತುಕತೆಗಳು ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯ ಮತ್ತು ಫೆಬ್ರವರಿ 28ಕ್ಕಿಂತ ಮೊದಲು ಇದ್ದ ಯಥಾಸ್ಥಿತಿಗೆ ಅದನ್ನು ಮರಳಿಸುವ ಅಗತ್ಯತೆಯ ಮೇಲೆಯೂ ಗಮನ ಹರಿಸಲಿವೆ ಎಂದು ಎಂದು ಖತಾರ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾತುಕತೆ ಪುನರಾರಂಭಿಸಲು ನಮಗೆ ಯಾವುದೇ ಅವಸರವಿಲ್ಲ : ಟ್ರಂಪ್
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಶಮನಗೊಳಿಸಲು ಖತರ್ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿರುವಂತೆಯೇ, ಇರಾನ್ ಮತ್ತೆ ಮಾತುಕತೆಗೆ ಮರಳಲು ತಮಗೆ ಯಾವುದೇ ನಿಗದಿತ ಕಾಲಮಿತಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಾತುಕತೆಗಳನ್ನು ಪುನರಾರಂಭಿಸಲು ತಮಗೆ ಯಾವುದೇ ಅವಸರವಿಲ್ಲ ಮತ್ತು ಅಮೆರಿಕವು ಇರಾನ್ ವಿರುದ್ಧ ಆರ್ಥಿಕ ಹಾಗೂ ಮಿಲಿಟರಿ ಒತ್ತಡವನ್ನು ಮುಂದುವರಿಸಲಿದೆ ಎಂದು ಟ್ರಂಪ್ರನ್ನು ಉಲ್ಲೇಖಿಸಿ `ಅಲ್ ಜಝೀರಾ' ವರದಿ ಮಾಡಿದೆ.
ನಾವು ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದೇವೆ. ಇರಾನ್ನಲ್ಲಿ ಭಾರಿ ಹಣದುಬ್ಬರವಿದೆ, ಅವರ ಆರ್ಥಿಕತೆಯು ಕುಸಿಯುತ್ತಿದೆ, ಅವರು ತಮ್ಮ ಜನರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ, ಅವರು ಅನೇಕ ಪ್ರತಿಭಟನಾಕಾರರನ್ನು ಕೊಲ್ಲುತ್ತಿದ್ದಾರೆ. ನನ್ನ ಬಳಿ ಯಾವುದೇ ಸಮಯದ ವೇಳಾಪಟ್ಟಿಯಿಲ್ಲ. ಅಗತ್ಯವಿರುವಷ್ಟು ಕಾಲ ಆರ್ಥಿಕ ಯುದ್ಧವನ್ನು ಮುಂದುವರಿಸಲು ನಾವು ಸಿದ್ಧವಾಗಿದ್ದೇವೆ' ಎಂದು ಟ್ರಂಪ್ ಹೇಳಿದ್ದಾರೆ.






