ನೌಕಾಯಾನ ಹಕ್ಕುಗಳು, ಸುರಕ್ಷತೆಗೆ ಕ್ವಾಡ್ ಸಚಿವರ ಆಗ್ರಹ; ಅನಿಯಂತ್ರಿತ ನಿರ್ಬಂಧ, ಆರ್ಥಿಕ ಒತ್ತಡದ ಅಪಾಯಗಳ ಬಗ್ಗೆ ಕಳವಳ

ಎಸ್. ಜೈಶಂಕರ್ | Photo Credit : PTI
ನ್ಯೂಯಾರ್ಕ್, ನ.1: ಅನಿಯಂತ್ರಿತ ರಫ್ತು ನಿರ್ಬಂಧಗಳು ಹಾಗೂ ಜಾಗತಿಕ ಪೂರೈಕೆ ಸರಪಳಿಗಳಿಗೆ ಧಕ್ಕೆ ತರುವಂತಹ ಪ್ರಕ್ರಿಯೆಗಳ ಮೂಲಕ ನಡೆಯುವ ಆರ್ಥಿಕ ಬೆದರಿಕೆ ಮತ್ತು ಒತ್ತಡಗಳ ಬಗ್ಗೆ ಕ್ವಾಡ್ ದೇಶಗಳ ವಿದೇಶಾಂಗ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಚೀನಾವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ, ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ವಿದೇಶಾಂಗ ಸಚಿವರು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ವಿರುದ್ಧವಾದ ನೀತಿಗಳು ಹಾಗೂ ಅತಿಯಾದ ಉತ್ಪಾದನೆಯಿಂದ ನಿರ್ಣಾಯಕ ಉದ್ಯಮಗಳ ಪೂರೈಕೆ ಸರಪಳಿಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಅಟ್ಲಾಂಟಾದಲ್ಲಿ ನಡೆದ ಸಭೆಯ ನಂತರ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ, ನಂಬಿಕಾರ್ಹ ಹಾಗೂ ಮುಕ್ತ ಜಾಗತಿಕ ಪೂರೈಕೆ ಸರಪಳಿಗಳನ್ನು ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ನಿರ್ಮಿಸಲು ತಮ್ಮ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಹಾಗೂ ಜಪಾನ್ನ ವಿದೇಶಾಂಗ ಸಚಿವ ತೋಷಿಮಿತ್ಸು ಮೊಟೆಗಿ ಭಾಗವಹಿಸಿದ್ದರು. ನಿರ್ಣಾಯಕ ಸಮುದ್ರ ಮಾರ್ಗಗಳ ಪ್ರಾಮುಖ್ಯತೆ, ತಡೆಯಿಲ್ಲದ ವಾಣಿಜ್ಯ ಹರಿವು, ಇಂಧನ ಭದ್ರತೆ ಹಾಗೂ ಯಾವುದೇ ಸುಂಕವಿಲ್ಲದೆ ಕಡಲ ಸಿಬ್ಬಂದಿ ಮತ್ತು ಹಡಗುಗಳ ತಡೆಯಿಲ್ಲದ ಸಂಚಾರ ಹಾಗೂ ಸುರಕ್ಷತೆಯ ಅಗತ್ಯವನ್ನು ಸಚಿವರು ಪ್ರತಿಪಾದಿಸಿದ್ದಾರೆ.
ಅಲ್ಲದೆ, ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಒಪ್ಪಂದಕ್ಕೆ ಅನುಗುಣವಾಗಿ ಹಾರ್ಮುಝ್ ಜಲಸಂಧಿ, ಕೆಂಪು ಸಮುದ್ರ ಮತ್ತು ಬಾಬ್ ಅಲ್-ಮಂಡೇಬ್ ಜಲಸಂಧಿಗಳಲ್ಲಿ ನೌಕಾಯಾನ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದ್ದಾರೆ.
►ತೈಲ ಪೂರೈಕೆಗೆ ಅಡ್ಡಿಪಡಿಸುವ ನಿರ್ಬಂಧಗಳಿಗೆ ಜೈಶಂಕರ್ ಖಂಡನೆ
ಜಾಗತಿಕ ತೈಲ ಪೂರೈಕೆಗೆ ಅಡ್ಡಿಪಡಿಸಲು ನಿರ್ಬಂಧಗಳು ಮತ್ತು ಆಯಕಟ್ಟಿನ ಸಂಚಾರ ಅಡೆತಡೆಗಳನ್ನು ಬಳಸುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಖಂಡಿಸಿದ್ದಾರೆ. ಇಂಧನ ವ್ಯಾಪಾರ ಮತ್ತು ಮೂಲಸೌಕರ್ಯಗಳ ಮೇಲಿನ ಉದ್ದೇಶಪೂರ್ವಕ ದಾಳಿಗಳು ಬೆಲೆಗಳನ್ನು ಒತ್ತೆಯಾಗಿ ಇರಿಸಿಕೊಳ್ಳಲು ರೂಪಿಸಿರುವ ಯೋಜಿತ ತಂತ್ರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
G20 ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ ಜೈಶಂಕರ್, ವಿಶ್ವವು ಉತ್ಪಾದನೆಯ ಕೊರತೆಯಿಂದಲ್ಲ, ಬದಲಾಗಿ ಅನಿಶ್ಚಿತತೆ, ಪೂರೈಕೆಯಲ್ಲಾಗುವ ಅಡಚಣೆಗಳು, ಭರಿಸಲಾಗದ ವೆಚ್ಚಗಳು ಮತ್ತು ಪ್ರವೇಶದ ಅಡೆತಡೆಗಳಿಂದಾಗಿ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದರು. ಇಂಧನ ಮಾರುಕಟ್ಟೆಗಳನ್ನು ಮುಕ್ತವಾಗಿ ಮತ್ತು ಸ್ಥಿರವಾಗಿ ಇರಿಸಲು G20 ತಿಳುವಳಿಕೆ ಮತ್ತು ನಾಯಕತ್ವ ಎರಡನ್ನೂ ಪ್ರದರ್ಶಿಸಬೇಕು ಎಂದು ತಿಳಿಸಿದರು.






