ಫ್ರಾನ್ಸ್ನಿಂದ 114 ರಫೇಲ್ ಫೈಟರ್ ಜೆಟ್ಗಳ ಖರೀದಿಗೆ ಡಿಎಸಿ ಅನುಮೋದನೆ

Photo Credit : PTI
ಹೊಸದಿಲ್ಲಿ,ಫೆ.12: ಫ್ರಾನ್ಸ್ನಿಂದ 114 ರಫೇಲ್ ಫೈಟರ್ ಜೆಟ್ಗಳನ್ನು ಖರೀದಿಸುವ ಮಹತ್ವದ ಪ್ರಸ್ತಾವನೆಗೆ ರಕ್ಷಣಾ ಖರೀದಿ ಮಂಡಳಿ(ಡಿಎಸಿ)ಯು ಗುರುವಾರ ಅನುಮೋದನೆ ನೀಡಿದೆ. ಭಾರತವು ಹಿಂದೆಂದೂ ಇಲ್ಲದಂತಹ ಬೃಹತ್ ಗಾತ್ರದ ವಿಮಾನಗಳನ್ನು ಹೊಂದಲು ಹಾಗೂ ಸ್ವದೇಶಿ ರಕ್ಷಣಾ ಉತ್ಪಾದನೆ ಕ್ಷೇತ್ರವನ್ನು ಗಣನೀಯವಾಗಿ ವಿಸ್ತರಿಸಲು ಈ ಪ್ರಸ್ತಾವನೆಯು ಹಾದಿ ಮಾಡಿಕೊಟ್ಟಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿಯು ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಕುರಿತು ಹೆಚ್ಚಿದ ಆತಂಕಗಳ ನಡುವೆಯೇ ರಾಫೇಲ್ ವಿಮಾನಗಳ ಖರೀದಿ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ. ಈ ತಿಂಗಳ ಅಂತ್ಯದ ವೇಳೆಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಯೋಜಿತ ಭಾರತ ಭೇಟಿಗೆ ಕೆಲವೇ ಸಮಯದ ಮೊದಲು ಈ ಅನುಮೋದನೆ ದೊರೆತಿದೆ. ಭಾರತ-ಫ್ರಾನ್ಸ್ ನಡುವೆ ವ್ಯೆಹಾತ್ಮಕ ಹಾಗೂ ಆಯಕಟ್ಟಿನ ರಕ್ಷಣಾ ಪಾಲುದಾರಿಕೆ ಹೆಚ್ಚುತ್ತಿರುವ ನಡುವೆ ಈ ಅನುಮೋದನೆ ದೊರೆತಿದೆ.
ರಕ್ಷಣಾ ಖರೀದಿ ಮಂಡಳಿಯ ಅನುಮೋದನೆಯ ಬಳಿಕ ಈ ಪ್ರಸ್ತಾವನೆಯು ಭದ್ರತೆ ಹಾಗೂ ವಿಸ್ತೃತ ವಾಣಿಜ್ಯ ಮಾತುಕತೆಗಳ ಕುರಿತ ಕೇಂದ್ರೀಯ ಸಮಿತಿಯ ಪರಿಶೀಲನೆಗೆ ಬರಲಿದೆ. ಭಾರತದ ಯುದ್ಧವಿಮಾನಗಳ ಆಧುನೀಕರಣ ಯೋಜನೆಯಲ್ಲಿ ಈ ಒಪ್ಪಂದವು ಪ್ರಮುಖ ಮೈಲುಗಲ್ಲಾಗಲಿದ್ದು, ದೇಶದಲ್ಲೇ ಉತ್ಕೃಷ್ಟ ಗುಣಮಟ್ಟದ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸಿಕೊಳ್ಳುವುದರ ಜೊತೆಗೆ ತುರ್ತು ಸೇನಾ ಅವಶ್ಯಕತೆಗಳನ್ನು ಈಡೇರಿಸಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
ಭಾರತದಲ್ಲೇ 90 ರಫೇಲ್ ಜೆಟ್ಗಳ ನಿರ್ಮಾಣ
ಭಾರತವು ಖರೀದಿಸಲಿರುವ 114 ರಫೇಲ್ ಫೈಟರ್ ಜೆಟ್ಗಳ ಪೈಕಿ 90 ವಿಮಾನಗಳು ದೇಶದಲ್ಲಿಯೇ ತಯಾರಾಗಲಿದ್ದು ಅವು 50 ಶೇಕಡದಷ್ಟು ಸ್ವದೇಶಿ ಸಾಮಾಗ್ರಿಗಳನ್ನು ಒಳಗೊಂಡಿರುವುದು. ಉಳಿದ ವಿಮಾನಗಳನ್ನು ಭಾರತೀಯ ವಾಯುಪಡೆಯ ತುರ್ತು ಕಾರ್ಯಾಚರಣೆಗಳ ಅಗತ್ಯಗಳಿಗೆ ಹೊಂದುವಂತೆ ಖರೀದಿಸಲಾಗುವುದು ಎಂದು ತಿಳಿದು ಬಂದಿದೆ.






