ಅತ್ಯಾಚಾರ ಪ್ರಕರಣ: ಪಾಕ್ ಉಪ ಪ್ರಧಾನಿ ಮೊಮ್ಮಗ ಸೇರಿ 8 ಮಂದಿಯ ವಿರುದ್ಧ ದೋಷಾರೋಪಣೆ

ಇಶಾಕ್ ದಾರ್ | Photo Credit : AP
ಲಾಹೋರ್, ನ. 11: ಇಬ್ಬರು ವಿದೇಶಿ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಮೊಮ್ಮಗ ರಜಾ ದಾರ್ ಸೇರಿದಂತೆ ಎಂಟು ಮಂದಿ ಆರೋಪಿಗಳ ವಿರುದ್ಧ ಲಾಹೋರ್ ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬುಧವಾರ ದೋಷಾರೋಪಣೆ ಮಾಡಿದ್ದಾರೆ.
ಔಪಚಾರಿಕ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಡಿಸೆಂಬರ್ 9ರಂದು ಸಾಕ್ಷಿಗಳನ್ನು ಹಾಜರುಪಡಿಸುವಂತೆ ನ್ಯಾಯಾಧೀಶರು ಪ್ರಾಸಿಕ್ಯೂಷನ್ ಗೆ ನಿರ್ದೇಶಿಸಿದ್ದಾರೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಎಲ್ಲಾ ಆರೋಪಿಗಳನ್ನು ದೋಷಾರೋಪಣೆ ಪ್ರಕ್ರಿಯೆಗಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ರಜಾ ದಾರ್ ಸೇರಿದಂತೆ ಐವರು ಆರೋಪಿಗಳನ್ನು ಅತ್ಯಾಚಾರದ ಆರೋಪದಿಂದ ಮುಕ್ತಗೊಳಿಸಿದ್ದರು. ಆದರೆ ಅಕ್ರಮ ಬಂಧನ ಮತ್ತು ಸುಲಿಗೆಗೆ ಸಂಬಂಧಿಸಿದ ಆರೋಪಗಳನ್ನು ಅವರ ವಿರುದ್ಧ ದಾಖಲಿಸಿದ್ದರು. ಉಳಿದ ಮೂವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಹೊರಿಸಲಾಗಿತ್ತು.




