ಆಸ್ಟ್ರೇಲಿಯಾ ಸೆನೆಟ್ ನಲ್ಲಿ ಅಪರೂಪದ ಸನ್ನಿವೇಶ: ಮಗುವನ್ನು ಎತ್ತಿಕೊಂಡು ಸಂಸತ್ತಿನಲ್ಲಿ ಭಾಷಣ ಮಾಡಿದ ಸೆನೆಟರ್ ಫಾತಿಮಾ ಪೇಮನ್

ಸೆನೆಟರ್ ಫಾತಿಮಾ ಪೇಮನ್ | Photo Credit : instagram.com
ಕ್ಯಾನ್ಬೆರಾ: ಆಸ್ಟ್ರೇಲಿಯಾದ ಸೆನೆಟ್ ನಲ್ಲಿ ಅಪರೂಪದ ಸನ್ನಿವೇಶವೊಂದು ಗಮನ ಸೆಳೆದಿದೆ. ಸೆನೆಟರ್ ಫಾತಿಮಾ ಪೇಮನ್ ಅವರು ತಮ್ಮ ಆರು ತಿಂಗಳ ಮಗಳು ಆಲಿಯಾಳನ್ನು ಎತ್ತಿಕೊಂಡೇ ಸದನದಲ್ಲಿ ಭಾಷಣ ಮಾಡುತ್ತಿದ್ದರೆ, ಅವರ ಹಿಂದೆ ಕುಳಿತಿದ್ದ ಮತ್ತೊಬ್ಬ ಸೆನೆಟರ್ ಲಿಡಿಯಾ ಥೋರ್ಪ್ ಮಗುವಿನೊಂದಿಗೆ ಆಟವಾಡಿ ರಂಜಿಸಿದರು. ಈ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ. 24 ಮತ್ತು 25ರಂದು ನಡೆದ ಸೆನೆಟ್ ಅಧಿವೇಶನದ ವೇಳೆ ಈ ಘಟನೆ ನಡೆದಿದೆ. ಪಶ್ಚಿಮ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುವ ಪಕ್ಷೇತರೆ ಸೆನೆಟರ್ ಪೇಮನ್ ಅವರು ತಮ್ಮ ಮಗಳನ್ನು ಎದೆಯ ಬಳಿ ಆರಾಮವಾಗಿ ಹಿಡಿದುಕೊಂಡು ಭಾಷಣ ಮುಂದುವರಿಸಿದರು. ಸಂಸತ್ತಿನ ಔಪಚಾರಿಕ ಕಲಾಪಗಳ ನಡುವಿನ ಈ ದೃಶ್ಯ ವಿಶೇಷ ಗಮನ ಸೆಳೆಯಿತು.
ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಮಗುವಿನ ಆರೈಕೆಯನ್ನೂ ಮಾಡುತ್ತಿರುವ ಪೇಮನ್ ಅವರ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ಜವಾಬ್ದಾರಿ ಮಸೂದೆ ಅಂಗೀಕಾರ
ಆಸ್ಟ್ರೇಲಿಯಾದ ಸೆನೆಟ್ ನಲ್ಲಿ 'ಡಿಜಿಟಲ್ ಡ್ಯೂಟಿ ಆಫ್ ಕೇರ್ ಬಿಲ್' (ಡಿಜಿಟಲ್ ಜವಾಬ್ದಾರಿ ಮಸೂದೆ) ಅಂಗೀಕಾರಗೊಂಡ ದಿನವೇ ಈ ಘಟನೆ ನಡೆದಿದೆ. ಈ ಮಸೂದೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪೇಮನ್, ಜನರ ಹಿತಕ್ಕಿಂತ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡುವ ದೊಡ್ಡ ತಂತ್ರಜ್ಞಾನ ಕಂಪೆನಿಗಳ (Big Tech) ವ್ಯವಹಾರ ಮಾದರಿಯನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.
ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಜವಾಬ್ದಾರಿಯನ್ನು ಹೆಚ್ಚಿಸುವುದು ಹಾಗೂ ಬಳಕೆದಾರರು, ವಿಶೇಷವಾಗಿ ಮಕ್ಕಳು, ಆನ್ಲೈನ್ ನಲ್ಲಿ ಎದುರಿಸಬಹುದಾದ ಅಪಾಯಗಳಿಂದ ಅವರನ್ನು ರಕ್ಷಿಸುವ ಅಗತ್ಯದ ಮೇಲೆ ಈ ಮಸೂದೆ ಗಮನ ಕೇಂದ್ರೀಕರಿಸಿದೆ.
ಮಕ್ಕಳನ್ನು ಸದನದೊಳಗೆ ಕರೆತರಲು ಅವಕಾಶ
ಇತರ ಹಲವು ದೇಶಗಳ ಶಾಸಕಾಂಗಗಳಿಗೆ ಹೋಲಿಸಿದರೆ, ಆಸ್ಟ್ರೇಲಿಯಾದ ಸೆನೆಟ್ ನಲ್ಲಿ ಜನಪ್ರತಿನಿಧಿಗಳು ತಮ್ಮ ಶಿಶಿಗಳನ್ನು ಸದನದೊಳಗೆ ಕರೆತರಲು ಅವಕಾಶವಿದೆ. ಸಂಸತ್ತಿನ ನಿಯಮಗಳ ಪ್ರಕಾರ, ಸೆನೆಟರ್ ಗಳು ಕಲಾಪಗಳಲ್ಲಿ ಭಾಗವಹಿಸುವಾಗ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಆಹಾರ ನೀಡಲು ಅನುಮತಿ ಇದೆ.
ಪೋಷಕರು ತಮ್ಮ ಚಿಕ್ಕ ಮಕ್ಕಳಿಂದ ದೂರವಿರದೆ ಸಂಸದೀಯ ಜವಾಬ್ದಾರಿಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಸತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಮಗುವಿಗೆ ಜನ್ಮ ನೀಡಿದ ಪಶ್ಚಿಮ ಆಸ್ಟ್ರೇಲಿಯಾದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೂ ಫಾತಿಮಾ ಪೇಮನ್ ಪಾತ್ರರಾಗಿದ್ದಾರೆ.
ಪೇಮನ್ ಅವರು ಅಫಘಾನಿಸ್ಥಾನದ ಕಾಬೂಲ್ ಮೂಲದವರು. ಫಾತಿಮಾ 2003ರಲ್ಲಿ ತಮ್ಮ ಕುಟುಂಬದೊಂದಿಗೆ ಅಪ್ಘಾನಿಸ್ತಾನದಿಂದ ಆಸ್ಟ್ರೇಲಿಯಕ್ಕೆ ಕುಟುಂಬದೊಂದಿಗೆ ವಲಸೆ ಹೋಗಿ ಅಲ್ಲೇ ನೆಲೆಸಿದ್ದಾರೆ.






