ನೆತನ್ಯಾಹುರನ್ನು ಕೆಳಗಿಳಿಸಲು ಅರಬ್ ಪಕ್ಷಗಳೊಂದಿಗೆ ಕೈಜೋಡಿಸಲು ಸಿದ್ಧ: ಗೋಲನ್

ಯೈರ್ ಗೋಲನ್ | Photo Credit : X
ಟೆಲ್ ಅವೀವ್, ಅ. 28: ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಸರಕಾರ ರಚಿಸಲು ಅರಬ್ ಪಕ್ಷಗಳೊಂದಿಗೆ ಕೈಜೋಡಿಸುವಂತೆ ಇಸ್ರೇಲ್ನ ಎಡಪಂಥೀಯ ನಾಯಕ ಯೈರ್ ಗೋಲನ್ ಬುಧವಾರ ತಮ್ಮ ಸಹಪಂಥೀಯ ವಿರೋಧ ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೈತ್ರಿಕೂಟದ ಬಲ 55 ಸ್ಥಾನಗಳಿಗೆ ಕುಸಿದಿದ್ದು, ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ. ವಿರೋಧ ಪಕ್ಷಗಳ ಒಕ್ಕೂಟ ಮತ್ತು ಅರಬ್ ಪಕ್ಷಗಳು ಒಟ್ಟಾಗಿ 65 ಸ್ಥಾನಗಳನ್ನು ಹೊಂದಿವೆ. ಬಹುಮತಕ್ಕೆ 61 ಸ್ಥಾನಗಳ ಅಗತ್ಯವಿದೆ. ಯಹೂದಿ ಮತ್ತು ಅರಬ್ ಮತದಾರರ ನಡುವಿನ ಕೃತಕ ವಿಭಜನೆಯನ್ನು ವಿರೋಧ ಪಕ್ಷಗಳು ತಿರಸ್ಕರಿಸಬೇಕು ಎಂದು 'ದಿ ಡೆಮೋಕ್ರಾಟ್ಸ್' ಪಕ್ಷದ ನಾಯಕ ಗೋಲನ್ ಒತ್ತಿಹೇಳಿದ್ದಾರೆ.
ಇಸ್ರೇಲ್ ತನ್ನ ಅರಬ್ ನಾಗರಿಕರ ವಿರುದ್ಧದ ಜನಾಂಗೀಯ ಧೋರಣೆಯನ್ನು ನಿಲ್ಲಿಸದಿದ್ದರೆ ದೇಶಕ್ಕೆ ಯಾವುದೇ ಭವಿಷ್ಯವಿರುವುದಿಲ್ಲ. ಯಹೂದಿ ಮತಗಳು ಮತ್ತು ಅರಬ್ ಮತಗಳ ನಡುವೆ ನೆತನ್ಯಾಹು ಸೃಷ್ಟಿಸಿರುವ ಜನಾಂಗೀಯ ವಿಭಜನೆಯನ್ನು ನಾವು ಇನ್ನು ಮುಂದೆ ಒಪ್ಪಿಕೊಳ್ಳಬಾರದು. ಅರಬ್ ನಾಗರಿಕರ ಧ್ವನಿಯನ್ನು ಅಳಿಸಿಹಾಕಲು ಯತ್ನಿಸುವವರು ನೆತನ್ಯಾಹು ಅವರಿಗೆ ಶರಣಾಗುತ್ತಿದ್ದಾರೆ ಮತ್ತು ಇಸ್ರೇಲ್ ಅನ್ನು ಕೈಬಿಡುತ್ತಿದ್ದಾರೆ ಎಂದು ಗೋಲನ್ ಎಚ್ಚರಿಸಿದ್ದಾರೆ.




