ಮತದಾರರ ಹೆಸರು ಕಿತ್ತುಹಾಕುವುದು ಪ್ರಜಾಪ್ರಭುತ್ವ ವಿರೋಧಿ: ಭಾರತ ಸರಕಾರದ ವಿರುದ್ಧ ಅಮೆರಿಕದ ಸಂಸದೆ ವಾಗ್ದಾಳಿ

ಪ್ರಮೀಳಾ ಜಯಪಾಲ್ | Photo Credit : X
ವಾಶಿಂಗ್ಟನ್: ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್ಐಆರ್) ಮೂಲಕ 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ `ತೆಗೆದುಹಾಕಲು' ಭಾರತ ಸರಕಾರವು ಕೈಗೊಂಡಿರುವ ಕ್ರಮಗಳು ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತವು ತೆಗೆದುಕೊಳ್ಳುತ್ತಿರುವ ಕ್ರಮಗಳಂತೆಯೇ ಕಂಡುಬರುತ್ತಿವೆ ಎಂದು ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ರೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಡೆಮಾಕ್ರಟಿಕ್ ಪಕ್ಷದ ನಾಯಕಿಯ ಈ ಹೇಳಿಕೆ ಬಂದಿದೆ.
ʼಅಹಿಂಸಾತ್ಮಕ ಪ್ರತಿರೋಧ ಚಳವಳಿಗಳು ಅತ್ಯಗತ್ಯವಾಗಿದ್ದು ಭಾರತದಲ್ಲಿ ಪ್ರಜಾಪ್ರಭುತ್ವ ವಿರೋಧಿ ಪ್ರಯತ್ನಗಳನ್ನು ಎದುರಿಸಲು ಅಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿರುವ ಭಾರತೀಯರೊಂದಿಗೆ ನಾನು ನಿಲ್ಲುತ್ತೇನೆ. ಎಲ್ಲಾ ಕಡೆಗಳಲ್ಲಿಯೂ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಗತ್ಯ ಕೆಲಸವಾಗಿದೆ. ಅಮೆರಿಕದ ಜನರಂತೆ ಭಾರತೀಯ ಜನರೂ ಸಹ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅರ್ಹರಾಗಿದ್ದಾರೆ' ಎಂದು ಪ್ರಮೀಳಾ ಜಯಪಾಲ್ ಹೇಳಿದರು.
ಅಮೆರಿಕದ ಸಂಸದೆಯ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ
ಅರ್ಹ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಮಾಡಿರುವ ಹೇಳಿಕೆಗಳನ್ನು ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ತೀವ್ರವಾಗಿ ಖಂಡಿಸಿದ್ದು, ಇವು ದೇಶದ ಆಂತರಿಕ ವ್ಯವಹಾರಗಳಲ್ಲಿ ಅಂಗೀಕರಿಸಲಾಗದ ಹಸ್ತಕ್ಷೇಪ ಎಂದು ಹೇಳಿದ್ದಾರೆ.
ʼಭಾರತವು ಬಲವಾದ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಿಕೊಂಡು ಬಂದ ಸುದೀರ್ಘ ಇತಿಹಾಸವನ್ನು ಹೊಂದಿರುವ ಜೀವಂತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂಸದೆಯವರ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅವರೊಂದಿಗೆ ರಚನಾತ್ಮಕವಾಗಿ ಮಾತನಾಡಲು ನಾವು ಯಾವಾಗಲೂ ಮುಕ್ತರಾಗಿದ್ದೇವೆ' ಎಂದು ಅವರು ಹೇಳಿದ್ದಾರೆ.






