ಇಸ್ಲಾಂ ಅಧ್ಯಯನಕ್ಕೆ ಹೊಸ ಆಯಾಮ ನೀಡಿದ್ದ ಪ್ರೊ. ಜಾನ್ ಎಲ್. ಎಸ್ಪೊಸಿಟೊ ನಿಧನ

Image Credit: aljazeera
ನ್ಯೂಯಾರ್ಕ್: ಇಸ್ಲಾಂ ಧರ್ಮದ ಕುರಿತು ಅಧ್ಯಯನ ನಡೆಸಿದ ಅತ್ಯಂತ ಗೌರವಾನ್ವಿತ ಮುಸ್ಲಿಮೇತರ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಅಮೆರಿಕದ ಪ್ರೊ. ಜಾನ್ ಎಲ್. ಎಸ್ಪೊಸಿಟೊ ಅವರು 86ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬ ಹಾಗೂ ಜಾರ್ಜ್ಟೌನ್ ವಿಶ್ವವಿದ್ಯಾಲಯ ತಿಳಿಸಿವೆ.
ಐದು ದಶಕಗಳಿಗೂ ಹೆಚ್ಚು ಕಾಲದ ವಿಶಿಷ್ಟ ಶೈಕ್ಷಣಿಕ ಜೀವನ ನಡೆಸಿದ್ದ ಎಸ್ಪೊಸಿಟೊ ಅವರು ಜುಲೈ 15ರಂದು ನಿಧನರಾದರು. 1940ರಲ್ಲಿ ನ್ಯೂಯಾರ್ಕ್ ನ ಬ್ರೂಕ್ಲಿನ್ ನಲ್ಲಿ ಜನಿಸಿದ್ದ ಅವರು, ಖ್ಯಾತ ಫೆಲೆಸ್ತೀನ್–ಅಮೆರಿಕನ್ ಇಸ್ಲಾಮಿಕ್ ವಿದ್ವಾಂಸ ಇಸ್ಮಾಯಿಲ್ ರಾಜಿ ಅಲ್-ಫಾರುಕಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದರು.
ಇಸ್ಲಾಂ ಧರ್ಮವನ್ನು ಹೊರಗಿನವರ ದೃಷ್ಟಿಯಿಂದಲ್ಲ, ಅದರ ಸ್ವಂತ ಧಾರ್ಮಿಕ ಸಂಪ್ರದಾಯಗಳು ಮತ್ತು ಮೂಲಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳಬೇಕು ಎಂಬುದು ಎಸ್ಪೊಸಿಟೊ ಅವರ ನಿಲುವಾಗಿತ್ತು. ತಮ್ಮ ಸಂಶೋಧನೆ ಮತ್ತು ಬೋಧನೆಯುದ್ದಕ್ಕೂ ಅವರು ಇದೇ ದೃಷ್ಟಿಕೋನವನ್ನು ಅನುಸರಿಸಿದರು.
ಮ್ಯಾಸಚೂಸೆಟ್ಸ್ ನ ಹೋಲಿ ಕ್ರಾಸ್ ಕಾಲೇಜಿನಲ್ಲಿ ಬೋಧನಾ ವೃತ್ತಿ ಆರಂಭಿಸಿದ ಎಸ್ಪೊಸಿಟೊ, ಸುಮಾರು ಎರಡು ದಶಕಗಳ ಕಾಲ ವಿಶ್ವ ಧರ್ಮಗಳ ಕುರಿತು ಬೋಧಿಸಿದರು. ಈ ಅವಧಿಯಲ್ಲಿ ಧಾರ್ಮಿಕ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದರು. ಬಳಿಕ ಜಾರ್ಜ್ಟೌನ್ ವಿಶ್ವವಿದ್ಯಾಲಯಕ್ಕೆ ಸೇರಿ, ಧರ್ಮ, ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಇಸ್ಲಾಮಿಕ್ ಅಧ್ಯಯನ ವಿಷಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
1993ರಲ್ಲಿ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ–ಕ್ರಿಶ್ಚಿಯನ್ ತಿಳಿವಳಿಕೆ ಕೇಂದ್ರವನ್ನು ಎಸ್ಪೊಸಿಟೊ ಸ್ಥಾಪಿಸಿದರು. ಬಳಿಕ ಈ ಕೇಂದ್ರಕ್ಕೆ ‘ಪ್ರಿನ್ಸ್ ಅಲ್ವಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ–ಕ್ರಿಶ್ಚಿಯನ್ ಅಂಡರ್ಸ್ಟ್ಯಾಂಡಿಂಗ್’ ಎಂದು ಮರುನಾಮಕರಣ ಮಾಡಲಾಯಿತು. ಅವರ ನೇತೃತ್ವದಲ್ಲಿ ಈ ಕೇಂದ್ರವು ಅಂತರಧರ್ಮೀಯ ಸಂವಾದದ ಪ್ರಮುಖ ಜಾಗತಿಕ ವೇದಿಕೆಯಾಗಿ ಬೆಳೆದಿತು. ಇಸ್ಲಾಮೋಫೋಬಿಯಾ ಕುರಿತು ಅಧ್ಯಯನ ನಡೆಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ‘ಬ್ರಿಡ್ಜ್ ಇನಿಶಿಯೇಟಿವ್’ ಸಂಶೋಧನಾ ಯೋಜನೆಯನ್ನೂ ಅವರು ಆರಂಭಿಸಿದರು.
ಎಸ್ಪೊಸಿಟೊ ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಹಲವಾರು ಕೃತಿಗಳಿಗೆ ಸಹ-ಲೇಖಕರಾಗಿಯೂ, ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಪುಸ್ತಕಗಳು 35ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. Islam: The Straight Path, The Islamic Threat: Myth or Reality?, What Everyone Needs to Know About Islam, The Future of Islam ಮತ್ತು Islamophobia: The Challenge of Pluralism in the 21st Century ಅವರ ಪ್ರಮುಖ ಕೃತಿಗಳಾಗಿವೆ.
ಡಾಲಿಯಾ ಮೊಗಾಹೆದ್ ಅವರೊಂದಿಗೆ ಸಹ-ಲೇಖಕರಾಗಿ ರಚಿಸಿದ 2007ರ Who Speaks for Islam? What a Billion Muslims Really Think ಕೃತಿಯಲ್ಲಿ ವಿಶ್ವದ ವಿವಿಧ ದೇಶಗಳ ಮುಸ್ಲಿಮರ ಅಭಿಪ್ರಾಯಗಳನ್ನು ಒಳಗೊಂಡ ವ್ಯಾಪಕ ಸಮೀಕ್ಷೆಗಳ ಆಧಾರದ ಮೇಲೆ ಇಸ್ಲಾಂ ಹಾಗೂ ಮುಸ್ಲಿಮರ ಕುರಿತು ಹರಡಿದ್ದ ಹಲವು ಪೂರ್ವಗ್ರಹಗಳನ್ನು ಪ್ರಶ್ನಿಸಿದ್ದರು.
ಅವರು The Oxford Dictionary of Islam ಮತ್ತು The Oxford Encyclopedia of the Islamic World ಸೇರಿದಂತೆ ಪ್ರಮುಖ ಉಲ್ಲೇಖ ಗ್ರಂಥಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಕ್ಯಾಥೊಲಿಕ್ ಧರ್ಮಾನುಯಾಯಿಯಾಗಿದ್ದ ಎಸ್ಪೊಸಿಟೊ, ತನ್ನ ಧರ್ಮದಲ್ಲಿ ದೃಢ ನಂಬಿಕೆ ಹೊಂದಿದ್ದರೂ ಇತರ ಧರ್ಮಗಳ ಬಗ್ಗೆ ಗೌರವ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಇರಬೇಕು ಎಂದು ಪ್ರತಿಪಾದಿಸುತ್ತಿದ್ದರು.
ಉತ್ತರ ಅಮೆರಿಕದ ಮಧ್ಯಪ್ರಾಚ್ಯ ಅಧ್ಯಯನ ಸಂಘ (Middle East Studies Association) ಹಾಗೂ ಅಮೆರಿಕನ್ ಅಕಾಡೆಮಿ ಆಫ್ ರಿಲಿಜನ್ ನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಧರ್ಮದ ಸಾರ್ವಜನಿಕ ತಿಳಿವಳಿಕೆಗೆ ನೀಡಿದ ಕೊಡುಗೆಗಾಗಿ ಮಾರ್ಟಿನ್ ಇ. ಮಾರ್ಟಿ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿದ್ದರು.
ಅವರ ನಿಧನಕ್ಕೆ ವಿಶ್ವದ ವಿವಿಧ ಭಾಗಗಳಿಂದ ಸಂತಾಪ ವ್ಯಕ್ತವಾಗಿದೆ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಪಾಶ್ಚಿಮಾತ್ಯ ಜಗತ್ತಿನಲ್ಲಿ ಇಸ್ಲಾಂ ಕುರಿತು ಆಳವಾದ ತಿಳಿವಳಿಕೆಯನ್ನು ಬೆಳೆಸಲು ಎಸ್ಪೊಸಿಟೊ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ್ದು, ಅವರನ್ನು ‘ಇಸ್ಲಾಮಿಕ್ ಜಗತ್ತಿನ ನಿಜವಾದ ಸ್ನೇಹಿತ’ ಎಂದು ಬಣ್ಣಿಸಿದ್ದಾರೆ.
ಅಮೆರಿಕನ್–ಇಸ್ಲಾಮಿಕ್ ಸಂಬಂಧಗಳ ಮಂಡಳಿ (CAIR) ಕೂಡ ಸಂತಾಪ ಸೂಚಿಸಿದ್ದು, ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ನಿಖರವಾದ ತಿಳಿವಳಿಕೆಯನ್ನು ಉತ್ತೇಜಿಸಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಹೇಳಿದೆ. ವಿದ್ಯಾರ್ಥಿಗಳು, ಸರ್ಕಾರದ ನೀತಿನಿರ್ಧಾರಕರು, ಪತ್ರಕರ್ತರು ಹಾಗೂ ಧಾರ್ಮಿಕ ನಾಯಕರ ಹಲವು ತಲೆಮಾರುಗಳಿಗೆ ಅವರು ಶಿಕ್ಷಣ ಮತ್ತು ಮಾರ್ಗದರ್ಶನ ನೀಡಿದರು ಎಂದು ಸಂಸ್ಥೆ ತಿಳಿಸಿದೆ.






